ಪರ್ಯಾಯ ಮಾರ್ಗಗಳ ಕುರಿತು ಚಿಂತನೆ

ದಾವಣಗೆರೆ : ಜಿಲ್ಲೆಯ ರೈತರು ಉತ್ಪಾದಿಸಿದ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಹಲವು ಪರ್ಯಾಯ ಮಾರ್ಗಗಳ ಚಿಂತನೆ ನಡೆದಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದರು.

ನಗರದ ಸರ್ಕಿಟ್ ಹೌಸ್‌ನಲ್ಲಿ ಮಂಗಳವಾರ ರೈತ ಮುಖಂಡರ ಸಭೆ ನಡೆಸಿದ ಅವರು, ಈ ವಿಚಾರವಾಗಿ ವಿಸ್ತೃತ ಚರ್ಚೆ ನಡೆಸಿದರು.

ಮೆಕ್ಕೆಜೋಳವನ್ನು ಬೆಂಬಲ ಬೆಲೆಗೆ ಖರೀದಿಸಿದರೆ ಪಡಿತರ ವ್ಯವಸ್ಥೆಯಡಿ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಅದು ಸಾಧ್ಯವಾಗದ ಮಾತು. ಹಾಗಾಗಿ ಆದೇಶದಲ್ಲಿ ಬದಲಾವಣೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಕ್ವಿಂಟಲ್‌ಗೆ 1700 ರೂ. ಬೆಂಬಲ ಬೆಲೆ ನಿಗದಿಯಾಗಿದ್ದರೂ ಖರೀದಿಸುವ ಸ್ಥಿತಿ ಇಲ್ಲ. ಬೆಲೆ ಕೊರತೆ ಪಾವತಿ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು, ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದನೆ, ಮೆಕ್ಕೆಜೋಳವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಕೃಷಿ ಇಲಾಖೆ ವ್ಯಾಪ್ತಿಗೆ ತರುವ ಬಗ್ಗೆ ಯೋಚಿಸಬಹುದಾಗಿದೆ ಎಂದು ತಿಳಿಸಿದರು.

ದಕ್ಷಿಣ ರಾಜ್ಯಗಳ ಮಟ್ಟದ ಸಭೆ


ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಕುರಿತು ಫೆ. 8 ರಂದು ಬೆಂಗಳೂರಿನಲ್ಲಿ ದಕ್ಷಿಣ ರಾಜ್ಯಗಳ ಮಟ್ಟದ ಸಭೆ ನಡೆಯಲಿದೆ ಎಂದು ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯಲ್ಲಿ ರಾಜ್ಯದ ಕೃಷಿ ಸಚಿವರು, ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಅಧ್ಯಕ್ಷ ಪ್ರೊ.ವಿ.ಪಿ. ಶರ್ಮಾ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಮೆಕ್ಕೆಜೋಳವನ್ನು ಬೆಂಬಲ ಬೆಲೆಗೆ ಖರೀದಿಸಿದರೆ ಪಡಿತರ ವ್ಯವಸ್ಥೆಯಡಿ ಹಂಚಿಕೆ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶದಲ್ಲಿ ಮಾರ್ಪಾಡು ತರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಹೆಚ್ಚಿನ ವಿವರಕ್ಕೆ ವಿಜಯವಾಣಿ ಓದಿ