ದಾವಣಗೆರೆ: ಶಿವನು ಹಿಡಿದ ಶಸ್ತ್ರಾಸ್ತ್ರಗಳನ್ನು ಕೈಬಿಟ್ಟು ಶಾಸ್ತ್ರಗಳನ್ನಿಡಿದು ಭೂಮಿಗೆ ಅವತರಿಸಿದ ದೇವರೇ ಸದ್ಗುರು. ಗುರುಸ್ಮತಿಯೇ ಹರನ ಸ್ಮರಣೆಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.
ಇಲ್ಲಿನ ಸದ್ಯೋಜಾತ ಮಠದಲ್ಲಿ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 38ನೇ ವರ್ಷದ ಸ್ಮರಣೋತ್ಸವ ಮತ್ತು ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 13ನೇ ವರ್ಷದ ಪುಣ್ಯರಾಧನೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಭಾವೈಕ್ಯ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದುಷ್ಟರ ಸಂಹಾರ ಮತ್ತು ಶಿಷ್ಟರ ಪರಿಪಾಲನೆಗೆ ನಾನಾ ಅವತಾರ ತಾಳಿದ ದೇವರ ಕೈಯಲ್ಲಿ ವಿಭಿನ್ನ ಶಸ್ತ್ರಾಸ್ತ್ರಗಳಿವೆ. ಆದರೆ ಸದ್ಗುರುವು ದುಷ್ಟರ ಬದಲಾಗಿ ದುಷ್ಟತನವನ್ನು ಸಂಹರಿಸುತ್ತಾನೆ. ಬುದ್ಧಿಯ ಪರಿವರ್ತನೆಗೆ ಶಸ್ತ್ರಾಸ್ತ್ರಗಳಿಗಿಂತ ಶಾಸ್ತ್ರದ ಅವಶ್ಯಕತೆ ಅಧಿಕವಾಗಿದೆ ಎಂದರು.
ಹೆತ್ತವರು ನಮ್ಮನ್ನು ಭೂಲೋಕಕ್ಕೆ ತಂದರೆ, ಗುರುವು ಸುಜ್ಞಾನ-ಸಂಸ್ಕಾರದೊಂದಿಗೆ ದೇವಲೋಕಕ್ಕೆ ಕರೆದೊಯ್ಯುತ್ತಾನೆ. ನಮ್ಮನ್ನು ಉದ್ಧರಿಸಿದ ಗುರುವಿನ ಉಪಕಾರದ ಋಣ ತೀರಿಸಲಾಗದು. ಬದುಕಿನ ಸಾರ್ಥಕತೆ ಮತ್ತು ಆತ್ಮೋನ್ನತಿಗಾಗಿ ಗುರುವನ್ನೂ ಸ್ಮರಿಸಬೇಕು ಎಂದು ಪ್ರತಿಪಾದಿಸಿದರು.
ಬೆಳಗ್ಗೆ ವಿನೋಬನಗರದ ಶ್ರೀಶೈಲ ಮಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ಮಾಡಲಾಯಿತು.
—