ಚಿಗಟೇರಿ ಆಸ್ಪತ್ರೆಗೆ ಡಿಸಿ ದಿಢೀರ್ ಭೇಟಿ

ದಾವಣಗೆರೆ: ನೂತನ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ, ಸೋಮವಾರ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.
ವಿವಿಧ ಘಟಕಕ್ಕೆ ತೆರಳಿ, ಅಲ್ಲಿರುವ ರೋಗಿಗಳ ಸಂಖ್ಯೆ, ದಿನಕ್ಕೆ ಮಾಡುವ ಎಕ್ಸರೇ-ಹೆರಿಗೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.

ನಿಮಗೆ ಇಲ್ಲಿ ತೊಂದರೆ ಆಗುತ್ತಿದೆಯಾ. ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ. ಊಟ ಸರಿಯಾಗಿ ಕೊಡುತ್ತಿದ್ದಾರಾ. ಕುಡಿವ ನೀರು ಸಿಗುತ್ತದೆಯಾ ಎಂದು ರೋಗಿಗಳನ್ನು ಪ್ರಶ್ನಿಸಿದರು.

ಆಸ್ಪತ್ರೆ ಕಾರಿಡಾರ್‌ನಲ್ಲೇ ನೆಲದ ಮೇಲೆ ರೋಗಿಗಳ ಸಂಬಂಧಿಕರನ್ನು ಕೂತಿದ್ದನ್ನು ಕಂಡು ಜನರು ಕೂರಲು ಒಂದೆಡೆ ಕುರ್ಚಿಗಳ ವ್ಯವಸ್ಥೆ ಮಾಡಿ ಎಂದು ಅಧೀಕ್ಷಕರಿಗೆ ಸೂಚಿಸಿದರು. ಎಕ್ಸರೇ ವಿಭಾಗದಲ್ಲಿ ಒಡೆದ ಕಿಟಕಿ ಗಾಜುಗಳನ್ನು ಸರಿಪಡಿಸಿ. 2-3 ದಿನದಲ್ಲಿ ಮತ್ತೆ ಬರುತ್ತೇನೆ ಎಂದು ತಿಳಿಸಿದರು.

ಹೆರಿಗೆ ವಿಭಾಗದಲ್ಲಿ ಕೆಟ್ಟು ಹೋದ ಕುಡಿವ ನೀರಿನ ಯಂತ್ರ ಸರಿಪಡಿಸಲು ಸೂಚಿಸಿದರು. ಊಟಕ್ಕೆಂದು ತಂದ ಸಾಂಬಾರ್ ಪರಿಶೀಲಿಸಿ ಇದರಲ್ಲಿ ಬೇಳೆ ಇದೆ. ಬಿಸಿಯೂ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅವಧಿ ಮುಗಿದರೂ ಆಸ್ಪತ್ರೆಯ ದುರಸ್ತಿ ಕಾಮಗಾರಿ ಅಪೂರ್ಣ ತಡವಾಗಿರುವ ಬಗ್ಗೆ ಆಕ್ಷೇಪಿಸಿದರು. ಶೀಘ್ರವೇ ಪರಿಶೀಲನಾ ಸಭೆ ನಡೆಸಿ ಕೆಎಚ್‌ಎಸ್‌ಆರ್‌ಡಿಪಿ ಇಂಜಿನಿಯರ್ ಜತೆ ಸಮಾಲೋಚಿಸಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದರಿಂದ 250 ಹಾಸಿಗೆಗಳ ಕೊರತೆ ನೀಗಲಿದೆ ಎಂದರು.

ಯಾವುದೇ ಸಮಸ್ಯಾತ್ಮಕ ಮಕ್ಕಳನ್ನು ಅಪೌಷ್ಠಿಕ ಮಕ್ಕಳ ವಿಶೇಷ ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿ ಚಿಕಿತ್ಸೆ ಆರಂಭಿಸಿದರೆ ಒಂದು ವರ್ಷದಲ್ಲಿ ಮಕ್ಕಳ ಅಪೌಷ್ಠಿಕತೆ ನೀಗಬಹುದು. ಜಿಲ್ಲೆಯ ಅಪೌಷ್ಠಿಕ ಮಕ್ಕಳ ಪಟ್ಟಿ ಕೊಡಿ ಎಂದರು.

ಆಸ್ಪತ್ರೆ ಆವರಣದ ಇಂದಿರಾ ಕ್ಯಾಂಟಿನ್‌ನಲ್ಲಿ ಟೊಮ್ಯಾಟೋ ಬಾತ್ ರುಚಿ ಸವಿದರು. ಇದೇ ಗುಣಮಟ್ಟ ಕಾಯ್ದುಕೊಳ್ಳಿ ಎಂದೂ ಹೇಳಿದರು. ಡಿಎಚ್‌ಒ ಡಾ.ಎಂ.ಎಸ್.ತ್ರಿಪುಲಾಂಭ, ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಮತ್ತಿತರರಿದ್ದರು.

ಆಸ್ಪತ್ರೇಲಿನ ಸ್ವಚ್ಛತೆಗೆ ಮೆಚ್ಚುಗೆ: ಆಸ್ಪತ್ರೆಯಲ್ಲಿ ಸ್ವಚ್ಛತೆ ಇದೆ. ರೋಗಿಗಳಿಗೆ ಉತ್ತಮ ಊಟ ನೀಡಲಾಗುತ್ತಿದೆ. ಕೊರತೆ ಇರುವ ಒಬ್ಬ ಜನರಲ್ ಫಿಜಿಷಿಯನ್ ಹುದ್ದೆ ತುಂಬುವ ಪ್ರಯತ್ನ ನಡೆಸಲಾಗುವುದು. ಬಜೆಟ್‌ನಲ್ಲಿ ಘೋಷಿಸಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲೆಗೆ ಬಾರದಿರುವ ಬಗ್ಗೆಯೂ ಪರಿಶೀಲಿಸಲಾಗುವುದು ಡಿಸಿ ಗೌತಮ್ ಬಗಾದಿ ಸುದ್ದಿಗಾರರಿಗೆ ತಿಳಿಸಿದರು. 100 ಹಾಸಿಗೆಗಳ ಪ್ರತ್ಯೇಕ ಹೆರಿಗೆ ವಾರ್ಡ್ ಪ್ರಸ್ತಾವನೆಗೆ ಉತ್ತರ ಬಂದಿಲ್ಲ. ಈ ಬಗ್ಗೆಯೂ ಗಮನ ಹರಿಸಲಾಗುವುದು. ಚನ್ನಗಿರಿಯಲ್ಲಿ ನೇತ್ರ ತಜ್ಞರು ಹಾಗೂ ಹರಪನಹಳ್ಳಿಯಲ್ಲಿ ಅರವಳಿಕೆ ತಜ್ಞರ ಕೊರತೆಯನ್ನು ಶೀಘ್ರವೇ ನೀಗಿಸಲಿದ್ದೇವೆ ಎಂದರು.