More

  ಕನಸುಗಳೊಂದಿಗೆ ಕೆಲಸ ಮಾಡಿ- ಡಾಲಿ ಧನಂಜಯ್ ಕಿವಿಮಾತು ‘ನಮ್ಮ ದವನ 24’ ಸಾಂಸ್ಕೃತಿಕ ಉತ್ಸವ

  ದಾವಣಗೆರೆ: ದವನ ಕಾರ್ಯಕ್ರಮ ನೋಡಿ ಖುಷಿ ಪಡಿ. ಅಷ್ಟೇ ಕನಸುಗಳನ್ನು ಇರಿಸಿಕೊಂಡು ಕೆಲಸ ಮಾಡಿ. ನೀವು ಏನೇನೆಲ್ಲ ಆಗಬೇಕು ಎಂದುಕೊಂಡಿದ್ದೀರೋ ಅದೆಲ್ಲ ಆಗುವ ಶಕ್ತಿ ನಿಮ್ಮೊಳಗೆ ಇದೆ. ಅದರಂತೆ ಆಗಬಹುದು. ಅದಕ್ಕಾಗಿ ಶ್ರಮ ಹಾಕಿ.
  ಚಿತ್ರನಟ ಡಾಲಿ ಧನಂಜಯ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತಿದು. ನಗರದ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನಮ್ಮ ದವನ 24’ ಎರಡು ದಿನದ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
  ನಿಮ್ಮ ಪ್ರೀತಿ ತುಂಬಾ ದೊಡ್ಡದು. ನನಗೆ ಹುಷಾರಿಲ್ಲ, ಸುಸ್ತಾಗಿದ್ದರೂ ವೇದಿಕೆ ಮೇಲೆ ಬಂದಿದ್ದೇನೆ. ನಿಮ್ಮ ಪ್ರೀತಿಗಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಅದಕ್ಕಿಂತ ಸಾರ್ಥಕತೆ ಬೇರೇನೂ ಇಲ್ಲ. ಇಲ್ಲಿಂದ ಹೋಗುವಾಗ ಸ್ವಲ್ಪ ಹುಷಾರಾಗಿ ಹೋಗುತ್ತೇನೆ ಎಂದೂ ಹೇಳಿದರು.
  ದಾವಣಗೆರೆಗೆ ನಾನು ಮೂರನೇ ಬಾರಿಗೆ ಬಂದಿದ್ದೇನೆ. ದವನ ಕಾರ್ಯಕ್ರಮಕ್ಕೆ ಬಂದಾಗೆಲ್ಲ ಅದೇ ಜೋಷ್ ಇರುತ್ತದೆ. ಇಂಜಿನಿಯರಿಂಗ್ ಕಾಲೇಜಿಗೆ ಬಂದಾಗೆಲ್ಲ ಇಷ್ಟು ಬೇಗ ವರ್ಷಗಳು ಉರುಳಿದವಾ ಎಂದು ಅನ್ನಿಸುತ್ತದೆ. ನಾನು ನಿಮ್ಮ ಹಾಗೆಯೇ ಇದ್ದೆ ಎಂದು ಸ್ಮರಿಸಿದರು. ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.
  ಜೂ.14ಕ್ಕೆ ನನ್ನ ನಟನೆಯ ಕೋಟಿ ಸಿನಿಮಾ ಬಿಡುಗಡೆಯಾಗಲಿದೆ. ನೀವೆಲ್ಲ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಪ್ರೋತ್ಸಾಹಿಸಿ. ನಾನು ಚಿಕ್ಕವನಾಗಿದ್ದಾಗ ಒಂದು ಕೋಟಿ ರೂ. ಹೊಂದಬೇಕೆಂಬ ಆಸೆ ಇತ್ತು. ನಿಮಗೂ ಅಂತಹ ಆಲೋಚನೆ ಇರಬಹುದು. ಕೋಟಿ ಚಿತ್ರ ನೋಡಿದರೆ ನೀವು ಕೋಟಿ ರೂ. ದುಡಿಯುತ್ತೀರಿ ಎಂದು ಹೇಳಿದರು.
  ನಟಿ ಮೋಕ್ಷಾ ಕುಶಾಲ್ ಮಾತನಾಡಿ ನಾನು ಕೂಡ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಓದಿದ್ದೇನೆ. ನಾವು ಇಷ್ಟಪಟ್ಟು ಮತ್ತು ಕಷ್ಟಪಟ್ಟು ಮಾಡಿದ ‘ಕೋಟಿ‘ ಸಿನಿಮಾ ನೋಡಿ. ಜೂ. 5ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಸಿ ಎಂದು ಹೇಳಿದರು.
  ದಾವಣಗೆರೆಯ ನಟ ಪೃಥ್ವಿ ಶಾಮನೂರು, ನಟ ಅಭಿಷೇಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಎಚ್.ಬಿ.ಅರವಿಂದ್, ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ಡಾ.ಜಿ.ಪಿ.ದೇಸಾಯಿ, ಡಾ.ಎಚ್.ಪಿ. ವಿನುತಾ, ಡಾ.ಪಿ.ಎಂ. ಕಲ್ಲೇಶಪ್ಪ, ಡಾ.ಮಾನವೇಂದ್ರ, ಡಾ. ದೇವೇಂದ್ರ ಇತರರಿದ್ದರು.
  ಮನ ತಣಿಸಿದ ಭಾರತೀಯ ನೃತ್ಯಗಳು
  ವೈಭವದ ಚಾಲನೆ ಕಂಡ ‘ನಮ್ಮ ದವನ’ ಉತ್ಸವದಲ್ಲಿನ ಕಾರ್ಯಕ್ರಮಗಳ ವೈವಿಧ್ಯ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಹೊಸ ಲೋಕಕ್ಕೆ ಕರೆದೊಯ್ದಿತು. ಭಾರತೀಯ ನೃತ್ಯಗಳ ಝಲಕ್, ಝಗಮಗಿಸಿದ ವಿದ್ಯುತಲಂಕಾರ, ವಿದ್ಯಾರ್ಥಿನಿಯರ ಬಿಂಕದ ನಡಿಗೆಗೆ ಕಾರ್ಯಕ್ರಮ ಸಾಕ್ಷಿಯಾಯಿತು.
  ಸಂಜೆ ಆಯೋಜಿಸಿದ್ದ ನೃತ್ಯ ಸ್ಪರ್ಧೆಗಳಲ್ಲಿ ಭಾರತದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯ ಶೈಲಿಯ ಜತೆಗೆ ಅಲ್ಲಿನ ಸಮಸ್ಯೆಗಳ ಅನಾವರಣಗೊಂಡವು. ಬಹುಬಗೆಯ ವೇಷಭೂಷಣಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಜಾನಪದೀಯ ನೃತ್ಯಗಳು ಸೊಬಗು ಹೆಚ್ಚಿಸಿದ್ದವು.
   ಮಣಿಪುರದ ಮೈತೆಯ್ ಹಾಗೂ ಕುಕಿ-ಜೋ ಬುಡಕಟ್ಟು ಪಂಗಡಗಳ ನಡುವಿನ ಜನಾಂಗೀಯ ದ್ವೇಷ ಹಾಗೂ ಸ್ತ್ರೀಯರ ಶೋಷಣೆಯ ನೃತ್ಯರೂಪಕ, ರಾಜಸ್ತಾನದ ಗಾರುಡಿ ಗೊಂಬೆ ಮಾದರಿಯ ನೃತ್ಯ, ಕರ್ನಾಟಕದ ಮಲೆ ಮಹದೇಶ್ವರ ದೈವಾರಾಧನೆಯ ನೃತ್ಯ, ಕಾರಿನ ಸಂರಕ್ಷಣೆ ಹಾಗೂ ಅಲ್ಲಿನ ಜನರ ಮೇಲಿನ ದೌರ್ಜನ್ಯ ಬಿಂಬಿಸುವ ನೃತ್ಯಗಳು ಗಮನ ಸೆಳೆದವು.
  ಸಂಗೀತ, ನಾಟಕ, ಕಿರುನಾಟಕ, ರಸಪ್ರಶ್ನೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ಒಟ್ಟು 16 ವಿಭಾಗವಾರು ಕಾಲೇಜಿನ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾದರು.

  See also  ಕುಸ್ತಿ ಪಟುಗಳ ಬೆಂಬಲಿಸಿ ರೈತರ ಪ್ರತಿಭಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts