ದಾವಣಗೆರೆ: ಕನ್ನಡದಲ್ಲಿ ಚಿತ್ರಿತವಾಗುತ್ತಿರುವ ಕೆಲವು ಕಳಪೆ ಚಿತ್ರಗಳು, ಮನೆಗಳಲ್ಲೇ ನಿರ್ಮಾಣವಾಗಿರುವ ಹೋಂ ಥಿಯೇಟರ್‌ಗಳು, ಮಲ್ಟಿಫ್ಲೆಕ್ಸ್‌ಗಳಲ್ಲಿ ಕುಟುಂಬದವರು ಸಿನಿಮಾ ನೋಡಲು ಆಗುತ್ತಿರುವ ದುಬಾರಿ ವೆಚ್ಚ. ಈ ಎಲ್ಲ ಕಾರಣಗಳಿಂದಾಗಿ ಜನರಲ್ಲಿ ಹಿಂದಿನಿಂತೆ ಸಿನಿಮಾ ವೀಕ್ಷಿಸುವ ಕ್ರೇಜ್ ಇಲ್ಲವಾಗಿದೆ ಎಂದು ಚಿತ್ರನಟ ಮೋಹನ್ ದುಃಖ ತೋಡಿಕೊಂಡರು.
ನಗರದ ಸುಕೃತೀಂದ್ರ ಕಲ್ಯಾಣಮಂದಿರದಲ್ಲಿ ಬ್ರಹ್ಮಗಂಟು, ಶ್ರಾವಣಿ ಸುಬ್ರಮಣ್ಯ ಧಾರಾವಾಹಿಗಳ ಕಲಾವಿದರು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಹೇಗಿದ್ದರೂ ಒಟಿಟಿಯಲ್ಲಿ ಸಿನಿಮಾ ನೋಡಬಹುದು ಎಂಬ ಕಾರಣಕ್ಕೆ ಜನರು ಚಿತ್ರಮಂದಿರಗಳತ್ತ ಬರುತ್ತಿಲ್ಲ. ಇನ್ನೊಂದೆಡೆ ಟಿವಿ ವಾಹಿನಿಗಳು ಮನರಂಜನೆಗೆ ಒತ್ತು ನೀಡುತ್ತಿವೆ. ನಾವು ಕೆಟ್ಟ ಸಿನಿಮಾಗಳನ್ನು ತೆಗೆಯುತ್ತಲೇ ಅರ್ಧ ಜನರನ್ನು ಚಿತ್ರರಂಗದಿಂದಲೇ ಓಡಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ರಚನೆ, ನಿರ್ದೇಶನ, ನಟನೆ, ಕಾಂಪೋಸ್ ಎಲ್ಲವನ್ನೂ ಕೆಲವೇ ಮಂದಿ ಮಾಡುತ್ತಿದ್ದಾರೆ. ಹೀಗಾಗಿ ೧೦ ಸಿನಿಮಾ ಮಾಡಲು ಬಂದ ನಿರ್ಮಾಪಕರು ಒಂದೇ ಚಿತ್ರಕ್ಕೆ ಬಂಡವಾಳ ಹೂಡುವಂತಾಗಿದೆ. ಒಂದು ಸಿನಿಮಾದಿಂದ ನಿರಾಸೆಗೊಂಡ ಪ್ರೇಕ್ಷಕರು ಮತ್ತೆ ಮೂರ್ನಾಲ್ಕು ತಿಂಗಳು ಥಿಯೇಟರ್‌ನತ್ತ ಮುಖ ಮಾಡುತ್ತಿಲ್ಲ ಎಂದು ಬೇಸರ ಹಂಚಿಕೊಂಡರು.
ಕಲ್ಕಿ ಸಿನಿಮಾ ಸುಮಾರು ೪೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಎಲ್ಲ ಸಿನಿಮಾಕ್ಕೂ ಇಂತಹ ಬಜೆಟ್ ಸಿಕ್ಕೋದಿಲ್ಲ. ಇಂದು ಸಿಂಗಲ್ ಸ್ಕ್ರೀನ್ ನಡೆಸುವುದು ಕಷ್ಟವಾಗಿದೆ. ಜನರ ಆದ್ಯತೆ ಕೂಡ ಬದಲಾಗಿದೆ ಎಂದರು.
ಕತೆಯೇ ನಾಯಕನಾಗಬೇಕು
ಜನರು ಥಿಯೇಟರ್ ಕಡೆಗೆ ಹೊರಳಲು ಕನ್ನಡ ಚಿತ್ರ ರಂಗದಲ್ಲಿ ಕತೆಯೇ ಹೀರೋ ಆಗಬೇಕಿದೆ. ಒಳ್ಳೆಯ ಕತೆಗಳಿಗೆ ಹೀರೋ ಆಗಿ ಬಂದವರು ಅನೇಕರಿದ್ದಾರೆ. ಮೊದಲೆಲ್ಲ ವಜ್ರೇಶ್ವರಿ, ಈಶ್ವರಿ ಕಂಬೈನ್ಸ್ ಚಿತ್ರ ನಿರ್ಮಾಣ ಸಂಸ್ಥೆಗಳಡಿ ಮದ್ರಾಸ್, ಮುಂಬಯಿಯಿಂದ ಐದಾರು ಜನ ಚರ್ಚೆ ನಡೆಸುತ್ತಿದ್ದ ಸಂಸ್ಕೃತಿ ಇಂದು ಇಲ್ಲವಾಗಿದೆ ಎಂದು ಹೇಳಿದರು.
ಕಲಾವಿದರಿಗೆ ಇಂದು ಬೆಲೆ ಇಲ್ಲ. ನಮಗೆ ಹೆಣ್ಣು ಕೊಡುವುದಿಲ್ಲ. ಬಾಡಿಗೆ ಮನೆ ಕೊಡುವುದಿಲ್ಲ. ನಮ್ಮಮಕ್ಕಳಿಗೆಶಾಲೆಗಳಲ್ಲಿ ಸೀಟು ಕೊಡುವುದಿಲ್ಲ. ಆದರೆ ನಮ್ಮನು ಕಾರ್ಯಕ್ರಮಕ್ಕೆ ಅತಿಥಿಗಳಂತೆ ಕರೆದು ಉದ್ಘಾಟನೆ ಮಾತ್ರ ಮಾಡಿಸುತ್ತಾರೆ ಎಂದು ಮೋಹನ್ ಸಂಕಟ ಹೇಳಿಕೊಂಡರು.
ಕಲಾವಿದರು ಒಂದಷ್ಟು ಹಣವನ್ನು ಒಕ್ಕೂಟಕ್ಕೆ ನೀಡಿದರೆ ಬದಲಾವಣೆ ನಿರೀಕ್ಷಿಸಬಹುದು. ಲೈಟ್ ಬಾಯ್ಸ್, ಟರ್ಯಾಲಿ ನಿರ್ವಹಣೆಯ ಕೆಲಸಗಾರರಿಗೆ ಕೆಲಸ ಇಲ್ಲದ ಸಂದರ್ಭದಲ್ಲಿ ಜೀವನ ನಿರ್ವಹಣೆ ಸಮಸ್ಯೆಯಾಗಲಿದೆ. ನಾವು ಒಂದಷ್ಟು ಹಣ ಕೂಡಿಕೊಳ್ಳದೆ ಯಾವ ಸರ್ಕಾರಗಳು ಸಹಾಯ ಮಾಡುವುದು ಸಾಧ್ಯವಿಲ್ಲ. ಇದು ಸಾಮಾನ್ಯ ಉದ್ಯಮವಲ್ಲ, ಇದಕ್ಕಾಗಿ ಹೋರಾಟವೂ ಬೇಕಿದೆ ಎಂದು ಹೇಳಿದರು.
ನಟಿ ಸಿತಾರಾ ಮಾತನಾಡಿ ಮನೆಗಳನ್ನು ಮುರಿದ ಕತೆಗಳನ್ನು ನೋಡಿ ಪಾತ್ರ ಮಾಡುತ್ತಿದ್ದೇವೆ. ನಾವು ಸಹ ಜೀವನದ ಎಷ್ಟೋ ಮಜಲು ದಾಟಿ ಬಂದಿದ್ದೇವೆ. ಕತೆಗಾರರು ಕತೆ ಬರೆದಿದ್ದಕ್ಕೆ ನಾವು ಪಾತ್ರ ನಿರ್ವಹಿಸಿದ್ದೇವೆ. ನಾವು ಮನೆಗಳನ್ನು ಮುರಿಯುತ್ತಿಲ್ಲ ಎಂದು ಹೇಳಿದರು.
ಹಿರಿಯ ನಟ ಶಿವಾಜಿರಾವ್ ಮಾತನಾಡಿ, ಜೀವನದಲ್ಲಿ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡೂ ಇರುತ್ತವೆ. ಯಾವು ದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಕೈಯಲ್ಲಿ ಇರುತ್ತದೆ. ಒಳ್ಳೆಯ ಜೊತೆಗೆ ಕೆಟ್ಟದ್ದು ಇರುತ್ತದೆ ಎಂಬ ಕಥೆಗಳ ಆಧಾರದಲ್ಲಿ ಧಾರಾವಾಹಿಗಳ ನಡೆಸಿಕೊಂಡು ಹೋಗಲಾಗುತ್ತದೆ. ನಮ್ಮ ಸುತ್ತಮುತ್ತಲೇ ನಡೆಯುವ ಅನೇಕ ಘಟನೆಗಳನ್ನೇ ಕಥೆಯನ್ನಾಗಿ ಹೆಣೆಯಲಾಗುತ್ತದೆ ಎಂದರು.
ಪಿಕ್ಷನ್ ವಿಭಾಗದ ಸುಶಾಂತ್ ಮಾತನಾಡಿ ಯಾವ ಧಾರಾವಾಹಿಗಳೂ ಕೆಟ್ಟವಲ್ಲ. ಅದರಲ್ಲಿ ಕೆಟ್ಟದ್ದು ಒಳ್ಳೆಯದು ಎರಡೂ ಇವೆ. ಜನರು ಒಳ್ಳೆಯ ಪಾತ್ರಗಳ ಬಗ್ಗೆಯೂ ಚರ್ಚೆ ಮಾಡಬೇಕು ಎಂದು ಆಶಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿರುತೆರೆ ಕಲಾವಿದರಾದ ಆಸಿಯಾ, ಪ್ರಜ್ಞಾಭಟ್, ಭುವನ್ ಸತ್ಯ, ಸೂರಜ್, ಭರತ್‌ನಾಯ್ಕ, ಕೀರ್ತಿ ವೆಂಕಟೇಶ್, ದಿಯಾ, ರೋಹಿತ್ ಶ್ರೀನಾಥ್, ಸ್ನೇಹಾ, ಅಮಿತ್, ಬೃಂದಾ, ಆರತಿ ಪಡುಬಿದ್ರೆ, ಶರಣ್ಯ, ಶ್ರೀಹರ್ಷ ಮತ್ತು ಶರಣಯ್ಯ ಇತರರು ಇದ್ದರು.
.