ಮಕ್ಕಳ ಗ್ರಾಮಸಭೆ ಕಡ್ಡಾಯಕ್ಕೆ ಆಗ್ರಹ

ದಾವಣಗೆರೆ: ಮಕ್ಕಳ ಗ್ರಾಮಸಭೆಗಳ ಕಡ್ಡಾಯ ಅನುಷ್ಠಾನ ಸೇರಿ ಕೆಲ ಕಾರ್ಯ ಚಟುವಟಿಕೆ ಕೈಗೊಳ್ಳಲು ಆಗ್ರಹಿಸಿ ಮಕ್ಕಳ ಹಕ್ಕುಗಳ ಕ್ಲಬ್ ಜಿಲ್ಲಾ ಒಕ್ಕೂಟದಡಿ ಮಕ್ಕಳು ಜಿಪಂ ಎದುರು ಧರಣಿ ನಡೆಸಿದರು.

ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ ಪ್ರಕಾರ ಪ್ರತಿ ವರ್ಷವೂ ಮಕ್ಕಳ ಗ್ರಾಮಸಭೆಯನ್ನು ಗ್ರಾಪಂಗಳೇ ಕಡ್ಡಾಯವಾಗಿ ನಡೆಸಬೇಕು. ಕೆಲವೆಡೆ ನಾಮಕೇ ವಾಸ್ತೆಗೆ ಗ್ರಾಮಸಭೆ ನಡೆಯುತ್ತಿವೆ.

ಮಕ್ಕಳು ಭಾಗವಹಿಸುವ ಮತ್ತು ರಕ್ಷಣೆ ವಿಚಾರದಲ್ಲಿ ಗಮನಾರ್ಹ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳ ಹಕ್ಕು ಎತ್ತಿ ಹಿಡಿವ ಅಧಿಕಾರಿ ಸಮೂಹ ತಯಾರಿಸುವಂತೆ ಆಗ್ರಹಿಸಿದರು.

ಜಿಪಂನಿಂದ ಒಂದು ಗ್ರಾಪಂಗೆ ಪ್ರತಿ ವರ್ಷ ಮಕ್ಕಳ ಸ್ನೇಹಿ ಪಂಚಾಯ್ತಿ ಪುರಸ್ಕಾರ ನೀಡಬೇಕು. ಮಕ್ಕಳ ಗ್ರಾಮಸಭೆ ನಡೆಸಲು ಪಿಡಿಒಗಳಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಆಯೋಜಿಸಬೇಕು. ಸಚಿವರು, ಶಾಸಕರು ಎಲ್ಲ ಹಂತದ ಅಧಿಕಾರಿಗಳು ಭಾಗವಹಿಸಬೇಕು.

ಪ್ರತಿ ವರ್ಷ ತಾಲೂಕಿನ ಒಂದು ಗ್ರಾಪಂ ಅನ್ನು ಬಾಲಕಾರ್ಮಿಕ ಮುಕ್ತ ಪಂಚಾಯ್ತಿಯಾಗಿ ವಾರ್ಷಿಕವಾಗಿ ಘೋಷಿಸಬೇಕು.ಮಕ್ಕಳ ರಕ್ಷಣಾ ಸಮಿತಿಗಳನ್ನು ಮತ್ತಷ್ಟು ಬಲಪಡಿಸಲು ಮಾಸಿಕ ಕೆಡಿಪಿ ಸಭೆಯ ಲ್ಲಿ ಚರ್ಚಿಸಬೇಕು.

ಪ್ರತಿ ವರ್ಷ ಜಿಲ್ಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಗಳ ಸಮಗ್ರ ವರದಿ ತಯಾರಿಸಿ ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು. ಇದರಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳು ಮತ್ತು ಜನಪ್ರತಿನಿಧಿಗಳು ನೀಡಿದ ಉತ್ತರ ದಾಖಲೀಕರಿಸಲು ಆಗ್ರಹಿಸಿದರು. ಆನಂತರ ಜಿಪಂ ಉಪಕಾರ್ಯ ದರ್ಶಿ ಷಡಕ್ಷರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ವಕೀಲ ಎಲ್.ಎಚ್.ಅರುಣ್‌ಕುಮಾರ್, ರಾಜ್ಯ ಸಂಯೋಜಕ ಬಿ. ಮಂಜಪ್ಪ, ಆರ್.ದುರುಗಪ್ಪ, ಶ್ರೀನಿವಾಸ್,ವಸಂತ್‌ಕುಮಾರ್, ರಾಜಪ್ಪ, ಹೀರಾನಾಯ್ಕ, ಮಕ್ಕಳ ಹಕ್ಕುಗಳ ಕ್ಲಬ್ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಶ್ರಾವಣಿ, ಶ್ರೀದೇವಿ, ಕರಿಬಸಮ್ಮ, ಅಜಯ್, ಹಂಸಿದ್ಧಪ್ಪ ಇದ್ದರು.