ದಾವಣಗೆರೆ: ಮೀಸಲಾತಿ ರದ್ದುಪಡಿಸುವಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕಾದ ಜಾರ್ಜ್‌ಟೌನ್‌ನ ವಿಶ್ವವಿದ್ಯಾಲಯದಲ್ಲಿ ನೀಡಿದ ಹೇಳಿಕೆ ವಿರೋಧಿಸಿ ಸೆ. 14ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಹೇಳಿದರು.
ಬೆಳಗ್ಗೆ 10.30ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ನಡೆಸಿ ಬಳಿಕ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಗುವುದು. ಮಾಜಿ ಸಂಸದ, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿ ಪಕ್ಷದ ಎಲ್ಲ ಜನಪ್ರತಿನಿಧಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಹುಲ್ ಗಾಂಧಿ ಸಂವಿಧಾನವನ್ನು ಅರ್ಥ ಮಾಡಿಕೊಂಡಿಲ್ಲ. ಅವರಿಗೆ ದಲಿತರ, ಹಿಂದುಳಿದವರ ಮತ ಬೇಕು. ಆದರೆ ಅವರಿಗೆ ಸೌಲಭ್ಯ ನೀಡುವುದು ಬೇಕಿಲ್ಲ. ಕಾಂಗ್ರೆಸ್ ಮೊದಲಿನಿಂದಲೂ ಮೀಸಲಾತಿ ವಿರೋಧಿ ನಡೆ ಅನುಸರಿಸಿಕೊಂಡು ಬಂದಿದೆ. ಮೀಸಲಾತಿ ದಲಿತರ ಹಕ್ಕು. ಅದನ್ನು ಯಾರೂ ಕೂಡ ಕಸಿದುಕೊಳ್ಳಲು ಬಿಜೆಪಿ ಬಿಡುವುದಿಲ್ಲ. ಕೂಡಲೇ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ಬಂದಿದೆ. ದಲಿತರ ಶ್ರೇಯೋಭಿವೃದ್ಧಿಗಾಗಿ ಸಮಗ್ರ ನೀತಿ ರೂಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ದಲಿತರನ್ನು ಮತ ಬ್ಯಾಂಕ್ ರೂಪದಲ್ಲಿ ಕಾಣುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್ ಮಾತನಾಡಿ ರಾಹುಲ್ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಅವರು ಇಟಲಿಯ ಪ್ರಭಾವವನ್ನು ದೇಶದಲ್ಲಿ ಬಿತ್ತಲು ಹೊರಟಿದ್ದಾರೆ. ದಲಿತರ ಕಾಂಗ್ರೆಸ್ ಎಂದು ಚುನಾವಣೆ ಸಮಯದಲ್ಲಿ ಹೇಳುತ್ತಾರೆ. ಬಳಿಕ ತಮ್ಮ ಇಬ್ಬಗೆಯ ನೀತಿ ತೋರಿಸುತ್ತಾರೆ. ಅವರ ಹೇಳಿಕೆಯಿಂದ ದಲಿತರಿಗೆ ನೋವಾಗಿದೆ. ಕೂಡಲೇ ಅವರು ದೇಶದ ಪರಿಶಿಷ್ಟ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕೆ.ಎಸ್. ಕೃಷ್ಣ ಕುಮಾರ್, ಮಂಜಾನಾಯ್ಕ, ಶಿವಕುಮಾರ್, ಗಂಗಾಧರ್ ಜಿ.ಬಿ., ಸುರೇಶ್, ದೊಡ್ಡೇಶಿ ಉಪಸ್ಥಿತರಿದ್ದರು.