ದಾವಣಗೆರೆ: ಕೃಷಿ ಭೂಮಿ, ದೇವಸ್ಥಾನದ ಜಾಗವನ್ನು ವಕ್ಫ್ ಮಂಡಳಿಗೆ ಹೆಸರಿಗೆ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ಘಟಕ ಸೋಮವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಳಗ್ಗೆ 11 ಗಂಟೆಗೆ, ರೈತ ಸಂಘಗಳು ಹಾಗೂ ಹಿಂದುಪರ ಸಂಘಟನೆಗಳ ಜತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿ ಆವರಣದಿಂದ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರು ಇತರೆ ಜಾಗಗಳ ಕುರಿತ ದಾಖಲಾತಿಗಳ ಸಂಬಂಧ ಜಿಲ್ಲೆಯಲ್ಲೂ ವಿಶೇಷ ಪಹಣಿ ಪರಿಶೀಲನಾ ಅಭಿಯಾನ ನಡೆಸಲಾಗುತ್ತಿದ್ದು, ಯಾವುದೇ ರೈತರು ತಮ್ಮ ಪಹಣಿ ಪರಿಶೀಲಿಸಿ ಅನ್ಯಾಯವಾಗಿದ್ದರೆ ಬಿಜೆಪಿ ಸಂಪರ್ಕಿಸಬೇಕು ಎಂದರು. ಇದಕ್ಕಾಗಿ ಜಿಲ್ಲೆಯ ಜನರಿಗಾಗಿ ಸಹಾಯವಾಣಿ 9845095092 ಸಂಖ್ಯೆಗೆ ಕರೆ ಅಥವಾ ವಾಟ್ಸಾೃಪ್ ಮಾಡಿ ಮಾಹಿತಿ ನೀಡಬೇಕು ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ ಮುಸ್ಲಿಮರ ತುಷ್ಟೀಕರಣಕ್ಕಾಗಿ ವಕ್ಫ್ ಕಾಯ್ದೆಯನ್ನು ಕಾಂಗ್ರೆಸ್‌ನವರು ಈ ಹಿಂದೆಯೇ ರೂಪಿಸಿದ್ದಾರೆ. ಇದೀಗ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್‌ನ ಕೆಲ ರಾಜಕಾರಣಿಗಳು ಸದ್ದಿಲ್ಲದೇ ಕೆಲ ಜಾಗವನ್ನು ವಕ್ಫ್ ಮಂಡಳಿಗೆ ಹಸ್ತಾಂತರ ಮಾಡಿದ್ದಾರೆ. ರೈತರಿಗೆ ನೀಡಲಾದ ನೋಟಿಸ್ ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದು ಸಾಲದು. ಆರ್‌ಟಿಸಿಯ 11ನೇ ಕಾಲಂನಲ್ಲಿ ವಕ್ಫ್ ಮಂಡಳಿ ಹೆಸರು ತೆಗೆದುಹಾಕಬೇಕೆಂದು ಆಗ್ರಹಿಸಿದರು.
ಹೊನ್ನಾಳಿ ತಾಲೂಕು ದಿಡಗೂರು ಹರಳಹಳ್ಳಿಯ ಸರ್ವೇ ನಂಬರ್ 4/1ರಲ್ಲಿ ರೈತ ಈರಪ್ಪ ಹಾಗೂ ಪತ್ನಿ ಗಿರಿಜಮ್ಮ ಹೆಸರಲ್ಲಿನ ಭೂಮಿ ವಕ್ಫ್ ಮಂಡಳಿ ಸುಪರ್ದಿಯಲ್ಲಿರುವುದಾಗಿ ಪಹಣಿಯಲ್ಲಿದೆ. 10 ಎಕರೆ ಮೇಲ್ಪಟ್ಟು ಮಾರುವುದನ್ನು ನಿಷೇಧಿಸಲಾಗಿದೆ ಎಂದೂ ಅದರಲ್ಲಿದೆ. ಇದು ಸುಳ್ಳೇ? ಇದು ಬಿಜೆಪಿಯ ಸೃಷ್ಟಿಯಾ? ಎಂದು ಜಿಲ್ಲಾ ಸಚಿವರ ಟೀಕೆಗೆ ಪ್ರತಿಕ್ರಿಯಿಸಿದರು.
ಮತಾಂಧ ಜಮೀರ್ ಅಹ್ಮದ್ ಮೂಲಕ ಬೇಕಾಬಿಟ್ಟಿಯಾಗಿ ರೈತರ ಜಮೀನನ್ನು ವಕ್ಫ್ ಮಂಡಳಿಗಾಗಿ ಕಬಳಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ವಾಸಿಸುವ ಕಾವೇರಿ ಗೃಹಕಚೇರಿ ಸೇರಿ ಎಲ್ಲ ಸರ್ಕಾರಿ ಕಚೇರಿಗಳನ್ನು ವಕ್ಫ್ ಗೆ ನೀಡಬಹುದು. ಮನಬಂದಂತೆ ಹಿಂದುಗಳ ವಿರುದ್ಧ ಹೇಳಿಕೆ ನೀಡಿದರೆ ಜಮೀರ್‌ಗೆ ಮುಂದಿನ ದಿನದಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದೂ ಎಚ್ಚರಿಕೆ ನೀಡಿದರು.
ಸರ್ಕಾರದ ಧೋರಣೆ ವಿರುದ್ಧ ರಾಜ್ಯ ಬಿಜೆಪಿ ಘಟಕ ಹೋರಾಟಕ್ಕೆ ಕರೆ ನೀಡಿದ್ದು ಇದಕ್ಕೆ ಮಠಾಧೀಶರು ಸಹಕರಿಸಬೇಕು. ಜನರು ಸಹ ತಮ್ಮ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿಕೊಂಡು ವಕ್ಫ್ ಪಾಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು ಎಂದು ಹೇಳಿದರು.
ಯುವ ಮುಖಂಡ ಮಾಡಾಳು ಮಲ್ಲಿಕಾರ್ಜುನ ಮಾತನಾಡಿ ಚನ್ನಗಿರಿ ತಾಲೂಕಿನ ಸೋಮಲಾಪುರದಲ್ಲೂ 8 ಎಕರೆ 3 ಗುಂಟೆ ಸರ್ಕಾರಿ ಜಮೀನನ್ನು ವಕ್ಫ್ ಮಂಡಳಿಗೆ ನೀಡಲಾಗಿದೆ. ಈ ಗ್ರಾಮದಲ್ಲಿ ಹಿಂದು ರುದ್ರಭೂಮಿಗೆ ಜಾಗ ಇಲ್ಲವಾಗಿದೆ ಎಂದರು.
ಸತೀಶ್ ಕೊಳೇನಹಳ್ಳಿ ಮಾತನಾಡಿ ದಾವಣಗೆರೆ ತಾಲೂಕಿನ ಬಾತಿ ಗ್ರಾಮದ ಬೀರದೇವರ ದೇವಸ್ಥಾನ ಕೂಡ ವಕ್ಫ್ ಆಸ್ತಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ವಿಪಕ್ಷ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜೆ. ಅಜಯಕುಮಾರ್, ಬಸವರಾಜನಾಯ್ಕ, ಅನಿಲ್‌ಕುಮ್ ನಾಯ್ಕ, ಐರಣಿ ಅಣ್ಣೇಶ್ ಇದ್ದರು.
ಹಿಂದು ವಿರೋಧಿ ಸರ್ಕಾರ
ಮಳೆಯಿಂದ ರಸ್ತೆಗಳಲ್ಲಿ ಬಿದ್ದ ಗುಂಡಿ ಮುಚ್ಚಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ಬೆಳೆಹಾನಿ, ಮನೆ ಹಾನಿ ಪರಿಹಾರ ನೀಡಿಲ್ಲ. ಆದರೆ ಕಳೆದ ತಿಂಗಳಲ್ಲಿ ವಕ್ಫ್ ಆಸ್ತಿ ಸಂರಕ್ಷಣೆಗೆ ಸರ್ಕಾರ 31.84 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ಹಿಂದು ವಿರೋಧಿ ಸರ್ಕಾರವಾಗಿದೆ.
ಎಂ.ಪಿ. ರೇಣುಕಾಚಾರ್ಯ
ಮಾಜಿ ಸಚಿವ.