ಸಮಾಜಮುಖಿ ಚಿಂತನೆ ಅಳವಡಿಸಿಕೊಳ್ಳಿ

ದಾವಣಗೆರೆ: ವಿದ್ಯಾರ್ಥಿಗಳು ಓದಿನ ಜತೆಗೆ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ದಾವಣಗೆರೆ ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಬಸವರಾಜ್ ಬಣಕಾರ್ ಹೇಳಿದರು.

ನಗರದ ಭದ್ರಾ ಪದವಿ ಕಾಲೇಜಿನಲ್ಲಿ ನಡೆದ 2018-19 ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಅವಶ್ಯಕತೆ ಇದೆ. ಅವರ ವ್ಯಕ್ತಿತ್ವ ಬೆಳವಣಿಗೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಂತ ಅವಶ್ಯಕ. ಆದರ್ಶ ವ್ಯಕ್ತಿಗಳ ಜೀವನಾಧಾರಿತ ಪುಸ್ತಕಗಳನ್ನು ಓದಿ, ಅವರ ಸಾಧನೆಯ ಮೆಟ್ಟಿಲುಗಳನ್ನು ಅರಿತು ತಮ್ಮಲ್ಲಿ ನಿದರ್ಶನೀಯ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಲು ತಿಳಿಸಿದರು.

ವಿದ್ಯಾಭ್ಯಾಸವನ್ನು ಕೇವಲ ಪರೀಕ್ಷೆ ಹಾಗೂ ಉದ್ಯೋಗ ದೃಷ್ಟಿಕೋನದಿಂದ ಮಾತ್ರ ನೋಡದೆ ಜೀವನ ಮೌಲ್ಯಗಳು, ನೈತಿಕತೆ ಹಾಗೂ ಆದರ್ಶ ಸಮಾಜದ ಪರಿಕಲ್ಪನೆ ಇರಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿವಿ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವನೆ ಅತ್ಯವಶ್ಯಕ ಎಂದರು.

ಭದ್ರಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮತ್ತು ಔದ್ಯೋಗಿಕ ಕೌಶಲ ರೂಪಿಸುವಲ್ಲಿ ಯಶಸ್ವಿಯಾಗುತ್ತಾ ಬಂದಿದೆ. ಕಾಲೇಜು 2009-10ರಲ್ಲಿ ಪ್ರಾರಂಭಗೊಂಡು 2019-20ನೇ ಶೈಕ್ಷಣಿಕ ಸಾಲಿಗೆ ದಶಮಾನೋತ್ಸವ ಆಚರಿಸಲು ದಾಪುಗಾಲಿಡುತ್ತಿದೆ.
ಪ್ರೊ.ಟಿ.ಮುರುಗೇಶ್
ಪ್ರಾಂಶುಪಾಲ, ಭದ್ರಾ ಪದವಿ ಕಾಲೇಜ್