ದಾವಣಗೆರೆ: ಜಿಲ್ಲೆಯ ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ರೈತರು ಭೂಮಿಯ ಸರ್ವೇ ಕಾರ್ಯ, ಖಾತೆ ಮಾಡಿಸುವುದು, ಪಿಂಚಣಿ, ಸರ್ಟಿಫಿಕೆಟ್ ಪಡೆಯುವುದು ಮುಂತಾದ ಕೆಲಸಗಳಲ್ಲಿ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೆ.15ರ ವರೆಗೆ ಗಡುವು ವಿಧಿಸಿದ್ದು, ಅವರು ಪೈಲಟ್ ಯೋಜನೆಯಾಗಿ ತಮ್ಮ ವ್ಯಾಪ್ತಿಯ 1 ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿರುವ ಅರ್ಹ ಫಲಾನುಭವಿಗಳೆಲ್ಲರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು ಎಂದರು.
ಗ್ರಾಮ ಲೆಕ್ಕಾಧಿಕಾರಿಗಳೇ ಫಲಾನುಭವಿಗಳಿಂದ ಅರ್ಜಿ ಪಡೆದು, ಮಾಸಾಶನ, ಪಿಂಚಣಿ ಸೇರಿ ಸರ್ಕಾರದ ಸೌಲಭ್ಯಗಳನ್ನು ಮಂಜೂರು ಮಾಡಿ ಆದೇಶವನ್ನು ಅವರ ಮನೆಗೆ ತಲುಪಿಸುವ ಜವಾಬ್ದಾರಿ ನೀಡಲಾಗಿದೆ.
ಜನಪ್ರತಿನಿಧಿಗಳ ಮಾರ್ಗದರ್ಶನ, ಸಹಕಾರದಿಂದ ಜಿಲ್ಲೆಯಲ್ಲಿ ಮೂಲಸೌಕರ್ಯಗಳ ಸುಧಾರಣೆ ಮತ್ತು ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸಲಾಗುವುದು. ಒಳಚರಂಡಿ ಜಾಲವನ್ನು ನಗರದಾದ್ಯಂತ ವಿಸ್ತರಿಸಲಾಗುವುದು. ಮಳೆನೀರು ಚರಂಡಿಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಋಣಮುಕ್ತ ಕಾಯ್ದೆಯಡಿ ಇದುವರೆಗೆ 500 ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಲು ಅ.20ರ ವರೆಗೆ ಅವಕಾಶವಿದೆ. ತಹಸೀಲ್ದಾರ್ಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಾಗರಿಕ ಮಿತ್ರ ಕೇಂದ್ರ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸರ್ಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ನಾಗರಿಕ ಮಿತ್ರ ಕೇಂದ್ರಗಳನ್ನು ಡಿಸಿ, ಎಸಿ, ತಹಸೀಲ್ದಾರ್ ಕಚೇರಿಗಳಲ್ಲಿ ಆರಂಭಿಸುವ ಚಿಂತನೆಯಿದೆ ಎಂದು ಡಿಸಿ ಹೇಳಿದರು.
ಅಶೋಕ ರೇಲ್ವೆ ಗೇಟ್ ಸಮಸ್ಯೆ: ನಗರದ ಅಶೋಕ ಚಿತ್ರಮಂದಿರ ಪಕ್ಕದ ರೈಲ್ವೆ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸಬೇಕೆಂಬುದು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಜನರ ಮನಸ್ಸನ್ನೂ ಗೆದ್ದು ಯೋಜನೆ ಕಾರ್ಯಗತ ಮಾಡುವ ಉದ್ದೇಶವಿದೆ ಎಂದು ಡಿಸಿ ತಿಳಿಸಿದರು.
ವಿಮಾನ ನಿಲ್ದಾಣಕ್ಕೆ ಬೇಡಿಕೆ: ನಗರಕ್ಕೆ ವಿಮಾನ ನಿಲ್ದಾಣ ಬೇಕೆಂಬುದು ಸ್ಥಳೀಯ ಜನಪ್ರತಿನಿಧಿಗಳ ಅಭಿಲಾಷೆಯಾಗಿದೆ. ಅದಕ್ಕೆ ಅಗತ್ಯವಾದ 500 ಎಕರೆ ಭೂಮಿಯ ಲಭ್ಯತೆಯ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಿಎಂ ಗಮನಕ್ಕೆ ತಂದು, ಯೋಜನೆ ಕಾರ್ಯಸಾಧ್ಯವಿದ್ದರೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.