ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಿಂದ ಕೊಕ್

ದಾವಣಗೆರೆ: ಬಿಸಿಎಂ ಹಾಸ್ಟೆಲ್‌ಗಳಿಂದ 1 ಸಾವಿರ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೊಕ್ ನೀಡಿರುವ ವಿಚಾರ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯ ಸಭೆಯಲ್ಲಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಕೆ.ಎಚ್.ಓಬಳಪ್ಪ ವಿಷಯ ಪ್ರಸ್ತಾಪಿಸಿದರು.

ಶೈಕ್ಷಣಿಕ ಸಾಲಿನಲ್ಲಿ ಆನ್‌ಲೈನ್ ಅರ್ಜಿ ಮೂಲಕ ಮೆರಿಟ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಮೆರಿಟ್ ರಹಿತವಾಗಿ ಹಾಸ್ಟೆಲ್‌ಗಳಲ್ಲಿದ್ದವರನ್ನು ಹೊರ ಕಳಿಸಲಾಗಿದೆ. ಮೆರಿಟ್ ರಹಿತರಿಗೆ ಪ್ರವೇಶಾತಿ ಕಲ್ಪಿಸಿದರೆ ಕ್ರಮ ಕೈಗೊಳ್ಳುವ ಬಗ್ಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದರಿಂದ ಸಮಸ್ಯೆಯಾಗಿದೆ ಎಂದು ವಿವರಿಸಿದರು.

ಈ ವಿಚಾರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತರಿಗೆ ಪತ್ರ ಬರೆದು, ಹಿಂದಿದ್ದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ಕಲ್ಪಿಸಲು ಸಿಇಒ ಪತ್ರ ಬರೆಯಬೇಕೆಂದು ಸದಸ್ಯರು ಸೂಚಿಸಿದರು.

ಚಿಗಟೇರಿ ಆಸ್ಪತ್ರೆ ಲಂಚಾವತಾರ: ಚಿಗಟೇರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗು ತೋರಿಸಲಿಕ್ಕೂ ಸಿಬ್ಬಂದಿಗೆ 500, 1000 ರೂ. ಕೊಡಬೇಕು. ಇಲ್ಲವಾದಲ್ಲಿ ಮಕ್ಕಳನ್ನೇ ಬದಲಾಯಿಸುತ್ತಾರೆ. ಶವಾಗಾರದಲ್ಲಿ ಪ್ಲಾಸ್ಟಿಕ್, ಹುರಿ, ಬಟ್ಟೆ ಉಚಿತ ಪೂರೈಕೆಯಿದ್ದಾಗ್ಯೂ 4500 ರೂ.ರವರೆಗೆ ಹಣ ಕೀಳಲಾಗುತ್ತಿದೆ. ಆಂಬುಲೆನ್ಸ್ ಸಿಬ್ಬಂದಿ ಕೂಡ ಇದಕ್ಕೆ ಹೊರತಾಗಿಲ್ಲ.

ಆಸ್ಪತ್ರೆಗೆ ನೆರೆಜಿಲ್ಲೆಗಳಿಂದಲೂ ಬಡರೋಗಿಗಳು ಬರುತ್ತಾರೆ. 15 ವೆಂಟಿಲೇಟರ್, 3 ಅಲ್ಟ್ರಾಸೌಂಡ್ ಯಂತ್ರ ಖರೀದಿಸಬೇಕು. ಇದಕ್ಕೆ ಸಮರ್ಪಕ ಸಿಬ್ಬಂದಿ ನಿಯೋಜಿಸಬೇಕೆಂದು ಸದಸ್ಯ ಕೆ.ಎಸ್.ಬಸವಂತಪ್ಪ ಬೇಡಿಕೆ ಇಟ್ಟರು.

ಆಸ್ಪತ್ರೆ ಸುಧಾರಣೆ ಸಂಬಂಧ ಸಭೆ ನಡೆಸಲು ಜಿಪಂ ಸದಸ್ಯರು ಒಟ್ಟಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸೋಣ ಎಂದು ಸದಸ್ಯ ತೇಜಸ್ವಿ ಪಟೇಲ್ ಹೇಳಿದರು.

ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಗುತ್ತಿಗೆ ಪಡೆದಿರುವ ಏಜೆನ್ಸಿಗಳು ಹೊರಗುತ್ತಿಗೆ ನೌಕರರಿಗೆ ಕಾನೂನುರೀತ್ಯ ಸೌಲಭ್ಯ, ವೇತನ ನೀಡುತ್ತಿರುವ ಬಗ್ಗೆ ವರದಿ ನೀಡುವಂತೆ ಅಧ್ಯಕ್ಷೆ ಶೈಲಜಾ, ಡಿಎಚ್‌ಒ ರಾಘವೇಂದ್ರಸ್ವಾಮಿಗೆ ಸೂಚಿಸಿದರು.

ಮಾತೃಪೂರ್ಣ ಯೋಜನೆಯಡಿ ಪೂರೈಸುವ ಸಾಂಬಾರ್ ಪುಡಿ ತಯಾರಿಸುವ ಕಾರ್ಖಾನೆ, ಪ್ಯಾಕೆಟ್‌ಗಳ ಮೇಲೆ ತಯಾರಿಕೆ ದಿನ, ಬಳಸುವ ಅವಧಿ, ದರವನ್ನು ನಮೂದು ಮಾಡದ ಬಗ್ಗೆ ಸದಸ್ಯೆ ಮಂಜುಳಾ ಟಿ.ವಿ.ರಾಜು ಆಕ್ಷೇಪಿಸಿದರು.

ಜಿಪಂ ಸಿಇಒ ಎಚ್.ಬಸವರಾಜೇಂದ್ರ ಇದ್ದರು.

ಎಫ್‌ಡಿಸಿಯೇ ಆಹಾರ ಉಸ್ತುವಾರಿ!: ದಾವಣಗೆರೆಯ ಅಂಗನವಾಡಿಗಳಿಗೆ 30 ವರ್ಷದಿಂದ ಮಹಿಳಾ ಪೌಷ್ಟಿಕ ಆಹಾರ ತರಬೇತಿ ಕೇಂದ್ರ(ಎಂಎಸ್‌ಪಿಟಿಸಿ) ಮೂಲಕ ಆಹಾರ ಪೂರೈಕೆ ಮಾಡುತ್ತಿದ್ದ ಎಫ್‌ಡಿಸಿಯೊಬ್ಬ ನಿವೃತ್ತಿ ನಂತರವೂ ಮುಂದುವರಿಸಿದ್ದಾನೆ ಎಂದು ಸದಸ್ಯ ಕೆ.ಎಚ್.ಓಬಳಪ್ಪ ಸಭೆ ಗಮನ ಸೆಳೆದರು.

ಕೆಲವು ಧಾನ್ಯಗಳಿಗೆ ಹೆಚ್ಚಿನ ದರ ವಿಧಿಸಿ, 35 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿದ್ದಾನೆ. ತನಿಖೆಗೆ ಹೋದವರು ಹಲ್ಲೆಗೆ ಒಳಗಾಗಿದ್ದಾರೆ. ಆತನಿಂದಾಗಿ ಅನೇಕ ಸಿಡಿಪಿಒಗಳು ಅಮಾನತಾಗಿದ್ದಾರೆ. ಕೆಲವು ಧಾನ್ಯ ಪರೀಕ್ಷಿಸಿದಾಗ ಅಸುರಕ್ಷಿತ ಎಂದು ಕಂಡುಬಂದಿದ್ದರೂ ಸಿಡಿಪಿಒ ಅವರು ‘ಸ್ಥಳೀಯವಾಗಿ ಬದಲಾವಣೆ ಮಾಡಿದ್ದಾಗಿ’ ಉತ್ತರಿಸಿದ್ದಾರೆ.

ಆಹಾರ ಪೂರೈಕೆ ಸಂಬಂಧ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಿಂದಲೆ ವಿಶೇಷ ಲೆಕ್ಕಪತ್ರ ತಪಾಸಣೆ ನಡೆಸಬೇಕು. ನ್ಯೂನತೆ ಕಂಡುಬಂದಲ್ಲಿ ಜಿಪಂ ಮುಂದಿನ ಕ್ರಮ ಕೈಗೊಳ್ಳಬಹುದು ಎಂದಾಗ ಸಭೆ ಸಮ್ಮತಿಸಿತು.

ಯೂರಿಯಾ ಖರೀದಿಗೆ ಲಿಂಕ್ ಬೇಡ: ಮೆಕ್ಕೇಜೋಳವನ್ನೇ ನಂಬಿರುವ ಜಗಳೂರು ತಾಲೂಕಿನಲ್ಲಿ ಬಿತ್ತನೆ ಕಡಿಮೆ ಇದೆ. ಈ ನಡುವೆ ಯೂರಿಯಾ ಗೊಬ್ಬರಕ್ಕೆ ಕೆಲ ಕಂಪನಿಗಳು ಇತರೆ ಗೊಬ್ಬರಗಳ ಹೊಂದಾಣಿಕೆ ಮಾಡಿ ಖರೀದಿಸುವಂತೆ ಒತ್ತಡ ಹೇರುತ್ತಿವೆ. ರೈತರು ಅನಗತ್ಯ ವೆಚ್ಚ ಮಾಡಬೇಕೇ ಎಂದು ಸದಸ್ಯ ಎಸ್.ಕೆ.ಮಂಜುನಾಥ್ ಪ್ರಶ್ನಿಸಿದರು.

ಈ ರೀತಿ ಮಾಡದಂತೆ ಮಾರಾಟಗಾರರಿಗೆ ತಾಕೀತು ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಹೇಳಿದರು.

ಭದ್ರಾ ನೀರು ಅಲಭ್ಯವಾದಲ್ಲಿ ಪರ್ಯಾಯ ಲಾಭಸಹಿತ ಬೆಳೆ ಬೆಳೆಯುವ ಕುರಿತಂತೆ ಕೃಷಿ ಬೆಲೆ ಆಯೋಗ, ಕಾಡಾ, ನೀರಾವರಿ, ಕೃಷಿ ಮತ್ತಿತರೆ ಇಲಾಖೆ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ನಡೆಸಬೇಕೆಂದು ತೇಜಸ್ವಿ ಪಟೇಲ್ ಸಲಹೆ ನೀಡಿದರು.