ದಾವಣಗೆರೆ: ಕಾಲೇಜುಗಳು ವಿದ್ಯಾರ್ಥಿಗಳಿಗೆ ಬದುಕುವ ಕಲೆ ಕಲಿಸುತ್ತಿಲ್ಲ. ಬದಲಾಗಿ ಇಂಜಿನಿಯರ್ ಮತ್ತಿತರೆ ಪದವೀಧರರನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ ಎಂದು ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥನಾಯ್ಕ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದಿಂದ ಭಾನುವಾರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಗದು ಪುರಸ್ಕಾರ ಮತ್ತು ಉಡುಪುಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳು ಇಂದು ಅಣಬೆಗಳಂತೆ ಹುಟ್ಟಿಕೊಂಡಿವೆ. ಪ್ರತಿ ನಾಲ್ಕು ಜನರಲ್ಲಿ ಇಬ್ಬರು ಇಂಜಿನಿಯರ್ಗಳಿದ್ದಾರೆ. ಬಿಜಿನೆಸ್ ಇಂಡಿಯಾ ಕಳೆದ ವರ್ಷ ನಡೆಸಿದ ಸಮೀಕ್ಷೆಯಂತೆ ದೇಶದಲ್ಲಿ 11,937 ಮಾನ್ಯತೆ ಪಡೆದ ಎಂಜಿನಿಯರಿಂಗ್ ಕಾಲೇಜುಗಳಿವೆ ಎಂದರು.
ಆರ್ಥಿಕ ಸ್ಥಿತಿವಂತರು ಹಾಗೂ ಇಲ್ಲದವರ ನಡುವಿನ ಅಂತರದ ಪ್ರಮಾಣ ದೊಡ್ಡದಿದೆ. ಅಸಮಾನತೆ ಹೆಚ್ಚಿದೆ. ಶೇ.73ರಷ್ಟು ದೇಶದ ಆಸ್ತಿ ಕೇವಲ ಶೇ.1ರಷ್ಟು ಜನರ ಕೈಯಲ್ಲಿದೆ. ಹೋಟೆಲ್ ಮದುವೆ ಮತ್ತಿತರೆ ಸಮಾರಂಭ ಸೇರಿ ಒಂದೆಡೆ ಶೇ.50ರಷ್ಟು ಆಹಾರಧಾನ್ಯ ವ್ಯರ್ಥವಾಗುತ್ತಿದೆ ಎಂದು ಬೇಸರಿಸಿದರು.
30 ಕೋಟಿ ಲೀ. ಖಾದ್ಯ ತೈಲ ಪೋಲಾಗುತ್ತಿದೆ. ಸರ್ಕಾರದ ಉಗ್ರಾಣಗಳಲ್ಲಿ ಸಂಗ್ರಹಿಸಿದ ಆಹಾರ ಧಾನ್ಯಗಳು ಸುರಕ್ಷತೆ ಇಲ್ಲದೇ ಹಾಳಾಗುತ್ತಿವೆ. ಮತ್ತೊಂದೆಡೆ 20 ಕೋಟಿ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ಇದೆ. ವರ್ಷಕ್ಕೆ 70 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಮೃತರಾಗುತ್ತಿದ್ದಾರೆ ಎಂದು ನೋವು ವ್ಯಕ್ತಪಡಿಸಿದರು.
ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟ ಅಧ್ಯಕ್ಷ ಎನ್.ಟಿ.ಹೆಗ್ಡೆ ಮಾತನಾಡಿ, ಬ್ಯಾಂಕ್ ನಿವೃತ್ತರ ಒಕ್ಕೂಟ ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಕೇವಲ ಇಂಜಿನಿಯರ್, ಡಾಕ್ಟರ್ ಆಗುವ ಕನಸು ಕಾಣದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎದುರಿಸಿ ಯಶಸ್ಸು ಸಾಧಿಸಬೇಕು. ಸಮಾಜ ಸೇವೆ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟವು ಸಂಘಟನೆ, ನಿವೃತ್ತ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟದ ಜತೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ಹಿಂದುಳಿದ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ನಗದು ಹಾಗೂ ಒಂದು ಜೊತೆ ಸಮವಸ್ತ್ರ ವಿತರಿಸಲಾಯಿತು. 75 ವರ್ಷ ಪೂರೈಸಿದ 6 ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ನಿವೃತ್ತರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜಿ.ವೆಂಕಟರಾವ್, ಅಖಿಲ ಭಾರತ ಕಾರ್ಪೋರೇಷನ್ ಬ್ಯಾಂಕ್ ನಿವೃತ್ತರ ಸಂಘದ ಅಧ್ಯಕ್ಷ ಕೆ.ರಾಮಪ್ರಿಯ, ಒಕ್ಕೂಟದ ರಾಜ್ಯ ವಿಭಾಗದ ಅಧ್ಯಕ್ಷೆ ಸಂಧ್ಯಾ ಎಸ್.ರಾವ್, ಕೋಟಕ್ ಮಹೀಂದ್ರ ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೆಂಕಟಾಚಲಪತಿ, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರ.ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ನಂಜುಂಡೇಶ್ವರ, ಪ್ರ.ಕಾರ್ಯದರ್ಶಿ ಜಿ.ರಂಗಸ್ವಾಮಿ, ಎನ್.ಟಿ.ಯರ್ರಿಸ್ವಾಮಿ, ಎಸ್.ಟಿ.ಶಾಂತಗಂಗಾಧರ್ ಇತರರಿದ್ದರು.