ರೈತನ ವಿರುದ್ಧದ ಪ್ರಕರಣ ವಾಪಸ್‌ಗೆ ಆಗ್ರಹ

ದಾವಣಗೆರೆ: ರೈತನ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದ ಹದಡಿ ರಸ್ತೆಯ ಆ್ಯಕ್ಸಿಸ್ ಬ್ಯಾಂಕ್ ಶಾಖೆ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.

ಬ್ಯಾಂಕ್ ಪ್ರವೇಶದ್ವಾರದ ಬಳಿ ಕುಳಿತ ಪ್ರತಿಭಟನಾಕಾರರು, ರೈತರ ಮೇಲಿನ ದೌರ್ಜನ್ಯ ತಡೆಗಟ್ಟಿ, ರೈತರನ್ನು ರಕ್ಷಿಸಿ, ಎಂದು ಘೋಷಣೆ ಕೂಗಿದರು.

ರೈತ ಮುಖಂಡ ದೇವರಾಜ್ ಮಲ್ಲಾಪುರ ಸುದ್ದಿಗಾರರೊಂದಿಗೆ ಮಾತನಾಡಿ, ಹರಿಹರ ತಾಲೂಕಿನ ಬೇವಿನಹಳ್ಳಿ ಮಹೇಶ್ ಎಂಬ ರೈತನಿಗೆ ಕೋಲ್ಕತ್ತ ನ್ಯಾಯಾಲಯದಿಂದ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂದು ತಿಳಿಸಿದರು.

ಎರಡು ದಿನಗಳ ಹಿಂದೆ ಪೊಲೀಸರು ಬಂಧನದ ವಾರೆಂಟ್‌ನೊಂದಿಗೆ ರೈತ ಬೇವಿನಹಳ್ಳಿ ಮಹೇಶ್ ಅವರ ಮನೆಗೆ ತೆರಳಿದ್ದರು. ಆಗಲೂ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಬ್ಯಾಂಕ್ ಅಧಿಕಾರಿಗಳು ಪ್ರಕರಣ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.

ಇದುವರೆಗೂ ಆ ನಿಟ್ಟಿನಲ್ಲಿ ಕ್ರಮ ಆಗಿಲ್ಲ. ಪೊಲೀಸರು ಮತ್ತೆ ರೈತನ ಮನೆಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇನ್ನೊಂದು ಬಾರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ರೈತರನ್ನು ಬಂಧಿಸಬಾರದು ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅವರ ಆದೇಶವನ್ನೂ ಬ್ಯಾಂಕಿನವರು ಪಾಲಿಸಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು.

ರೈತ ಬೇವಿನಹಳ್ಳಿ ಮಹೇಶ್, ರೈತ ಮುಖಂಡರಾದ ಮೆಣಸಿನಹಾಳ್ ರುದ್ರಗೌಡ, ಗುತ್ತೂರು ಮಂಜಪ್ಪ, ರಾಜಪ್ಪ, ಹನುಮೇಶ್, ಹನುಮಂತಪ್ಪ ಇತರರು ಪ್ರತಿಭಟನೆಯಲ್ಲಿದ್ದರು.

Leave a Reply

Your email address will not be published. Required fields are marked *