ಶ್ರಮದಲ್ಲಿ ಅಡಗಿದೆ ಅದೃಷ್ಟ: ಶ್ರೀ ಬಸವಪ್ರಭು ಸ್ವಾಮೀಜಿ ಅನಿಸಿಕೆ

ದಾವಣಗೆರೆ: ಪರಿಶ್ರಮದಿಂದ ಮಾತ್ರವೇ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ಕೆಲವರು ಪರಿಶ್ರಮವಿಲ್ಲದೆ ಕೇವಲ ಉನ್ನತ ಸ್ಥಾನ ಬಯಸುತ್ತಾರೆ. ಇದು ಅರ್ಥಹೀನ ಎಂದರು.

ಬದುಕಿನಲ್ಲಿ ಸ್ಪಷ್ಟ ಗುರಿ ಇರಿಸಿಕೊಂಡಾಗ ಉನ್ನತ ದಾರಿ ಸಿಗಲಿದೆ. ಗುರಿ ಇಲ್ಲವಾದರೆ ನಮ್ಮಲ್ಲಿನ ಪ್ರತಿಭೆ ಹಾಳು ಮಾಡಿ ಕೊಂಡಂತಾಗಲಿದೆ. ಗುರಿ ಜತೆ ಪರಿಶ್ರಮವಿದ್ದಾಗಲೆ ಬದುಕು ಪ್ರಗತಿ ಕಾಣಲಿದೆ ಎಂದರು.

ಬದುಕು ಒಂದು ಕಲೆ. ಕಲೆಯನ್ನು ಕರಗತ ಮಾಡಿಕೊಂಡಾಗ ಮಾತ್ರ ಬದುಕಿಗೆ ಬೆಲೆ ಬರಲಿದೆ. ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ಕೂತರೆ ಅರ್ಧ ಆಯಸ್ಸು ಮುಗಿಯಲಿದೆ. ನಮ್ಮ ಬದುಕಿನ ಶಿಲ್ಪಿ ನಾವೇ ಆಗಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಕೂಡ ಅತಿಮುಖ್ಯ. ಹೆಚ್ಚು ಸಮಯವನ್ನು ಓದಿಗೆ ಮೀಸಲಿಡಬೇಕು. 25 ವರ್ಷದ ಓದು 75 ವರ್ಷದಲ್ಲಿ ನೆರವಿಗೆ ಬರಲಿದೆ ಎಂದರು.

ಮೋಜು-ಮಸ್ತಿಗಾಗಿ, ಮೊಬೈಲ್ ಗೇಮ್‌ಗಳಿಗೆ ಸಿಕ್ಕು ಕಾಲಹರಣ ಮಾಡಬಾರದು. ಪುಸ್ತಕ ಓದುವ, ಗಿಡ-ಮರಗಳನ್ನು ಪಾಲನೆ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ದುಶ್ಚಟ, ದುರ್ಜನರ ಸಂಗದಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಸ್.ಬಸವರಾಜಪ್ಪ, ಪಪೂ ಕಾಲೇಜ್ ಪ್ರಾಚಾರ್ಯ ಕೆ.ಬೊಮ್ಮಣ್ಣ, ಪ್ರಾಧ್ಯಾಪಕರಾದ ಪ್ರೊ.ಮಲ್ಲಿಕಾರ್ಜುನ ಹಲಸಂಗಿ, ಪ್ರೊ.ಜೆ.ಕೆ.ಮಲ್ಲಿಕಾರ್ಜುನಪ್ಪ, ಅನಿತಾಕುಮಾರಿ ಇದ್ದರು.