ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ

ದಾವಣಗೆರೆ: ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಂಪುಟ ಉಪ ಸಮಿತಿ ನೀಡಿದ್ದ ನಿರ್ದೇಶನವನ್ನು ಸರಿಯಾಗಿ ಪಾಲಿಸದ ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ, 2018-19ನೇ ಸಾಲಿನ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ವಿಫಲ ಕೊಳವೆ ಬಾವಿಗಳನ್ನು ಅಗತ್ಯವಿದ್ದರೆ 1200 ಅಡಿ ಆಳದ ವರೆಗೂ ಕೊರೆಯುವಂತೆ ನಿರ್ದೇಶನ ನೀಡಲಾಗಿತ್ತು. ಅಧಿಕಾರಿಗಳು ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು 10 ದಿನದೊಳಗೆ ಇದನ್ನು ಸರಿಪಡಿಸುವಂತೆ ಗಡುವು ವಿಧಿಸಿದರು.

ಸಂತೆಮುದ್ದಾಪುರ ಬಹುಗ್ರಾಮ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಕೊಡಿಸುವಂತೆ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.