ದಾವಣಗೆರೆ : ಯುವ ಜನರು ದೇಶದ ಶಕ್ತಿಯಾಗಿದ್ದು ರಾಷ್ಟ್ರದ ಭವಿಷ್ಯ ಅವರ ಕೈಯಲ್ಲಿದೆ. ಚುನಾವಣೆಯಲ್ಲಿ ಮತ ಚಲಾಯಿಸಿದರೆ ಸಾಲದು, ಐದು ವರ್ಷ ಸರ್ಕಾರ ರೂಪಿಸುವ ನೀತಿ ನಿರೂಪಣೆ ಹಾಗೂ ಜನಪ್ರತಿನಿಧಿಗಳ ಕಾರ್ಯಗಳನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ನಗರದ ಬಿ.ಐ.ಇ.ಟಿ ಕಾಲೇಜಿನ ಎಸ್.ಎಸ್.ಎಂ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ, ರಾಜ್ಯಮಟ್ಟದ ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಂವಿಧಾನ ನಮಗೆ ಹಕ್ಕು ನೀಡಿದೆ. ಅವುಗಳ ಜತೆಗೆ ಕರ್ತವ್ಯಗಳನ್ನೂ ತಿಳಿದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ದೇಶದ ಸಂವಿಧಾನವನ್ನು ಪರಿಚಯಿಸುವ ದೃಷ್ಟಿಯಿಂದ ‘ನಿಮ್ಮ ಸಂವಿಧಾನವನ್ನು ಅರಿಯಿರಿ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು. ಯುವಜನರು ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿ ಅರಿತು ನಡೆಯಬೇಕು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಯುವಜನೋತ್ಸವದಲ್ಲಿ ವಿಜೇತರಾದ ಕಲಾ ತಂಡಗಳಿಗೆ 1 ಲಕ್ಷ ರೂ. ಬಹುಮಾನ ನೀಡಬೇಕು. ಈ ವಿಚಾರವಾಗಿ ಸಿಎಂ ಜತೆಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಇಂಥ ಉತ್ಸವಗಳಲ್ಲಿ ದುಂದು ವೆಚ್ಚ ಕಡಿಮೆ ಮಾಡಿ ಅದೇ ಹಣವನ್ನು ಕಲಾವಿದರಿಗೆ ತಲುಪಿಸಬೇಕು ಎಂದು ತಿಳಿಸಿದರು. ಹರಿಹರ ಶಾಸಕ ಬಿ.ಪಿ. ಹರೀಶ್, ಮೇಯರ್ ಚಮನ್ ಸಾಬ್ ಮಾತನಾಡಿದರು. ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಕೆ.ನಾಗನಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಜಾನಪದ ಗಾಯಕ ಅಪ್ಪಿಗೆರೆ ತಿಮ್ಮರಾಜು ಇದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ತಂಜಾವೂರಿನ ದಕ್ಷಿಣ ಸಾಂಸ್ಕೃತಿಕ ಕೇಂದ್ರದಿಂದ ಆಗಮಿಸಿದ ಕಲಾವಿದರು ಕೇರಳದ ಮಾರಿಥೈಯಂ ನೃತ್ಯ ಪ್ರದರ್ಶಿಸಿದರು. ಪಂಜಾಬ್ ತಂಡ ಬಾಂಗ್ಡಾ, ಮುಂಬೈ ತಂಡದ ಕಲಾವಿದರು ಲಾವಣಿ ನೃತ್ಯದ ಮೂಲಕ ಜನಮನ ಸೂರೆಗೊಂಡರು. ಮಧ್ಯಪ್ರದೇಶ ತಂಡ ಬದಾಯಿ ನೃತ್ಯ ಹಾಗೂ ದಾವಣಗೆರೆ ಕಲಾ ತಂಡದವರು ಕಂಸಾಳೆ ನೃತ್ಯ ಪ್ರದರ್ಶಿಸಿದರು. ದಾವಣಗೆರೆಯ ನಿರೂಪಕಿ ಶೃತಿ ರಾಜು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. … (ಬಾಕ್ಸ್) ರಾಜಕೀಯ ಪ್ರಸ್ತಾಪ, ಗೊಂದಲ ಯುವಜನರ ವಿಚಾರಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ಸಮಾರೋಪ ಸಮಾರಂಭದಲ್ಲಿ ರಾಜಕೀಯ ವಿಷಯಗಳು ಪ್ರಸ್ತಾಪವಾಗಿದ್ದರಿಂದ ಗೊಂದಲಕ್ಕೆ ಕಾರಣವಾಯಿತು. ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ರಾಜ್ಯ ಸರ್ಕಾರ ಕಲಾವಿದರಿಗೆ ಹಣ ನೀಡಲೂ ಆಗದ ಸ್ಥಿತಿಯಲ್ಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಇದೇ ಪರಿಸ್ಥಿತಿ ಇದ್ದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆ ನಾವು ಮುಖ ಮುಚ್ಚಿಕೊಂಡು ಜನರ ಬಳಿಗೆ ಹೋಗಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳಿದರು. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಶಾಸಕ ಹರೀಶ್ ಪ್ರಸ್ತಾಪಿಸುತ್ತಿದ್ದಂತೆ ಸಭಾಂಗಣದಲ್ಲಿದ್ದ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇದಿಕೆಯಲ್ಲಿ ರಾಜಕೀಯ ವಿಚಾರ ಪ್ರಸ್ತಾಪ ಬೇಡ ಎಂದು ಕೂಗಿದರು. ವೇದಿಕೆಯಲ್ಲಿದ್ದ ಮೇಯರ್ ಚಮನ್ ಸಾಬ್ ಅವರೂ ಧ್ವನಿಗೂಡಿಸಿದರು. ಇದರಿಂದ ಕೆಲ ಸಮಯ ಗೊಂದಲ ಉಂಟಾಯಿತು. ಆ ಹಂತದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಡಿಸಿ, ಸಿಇಒ ಹಾಗೂ ಹೆಚ್ಚುವರಿ ಎಸ್ಪಿ ಅವರು ಶಾಸಕ ಹರೀಶ್ ಬಳಿಗೆ ಬಂದು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು. ನಂತರ ಮಾತನಾಡಿದ ಮೇಯರ್ ಚಮನ್‌ಸಾಬ್, ಇದು ರಾಜಕೀಯ ವೇದಿಕೆ ಆಗಬಾರದಿತ್ತು. ಸೌಹಾರ್ದತೆ, ಪ್ರೀತಿಯಿಂದ ಏನನ್ನಾದರೂ ಸಾಧಿಸಬಹುದು, ದ್ವೇಷದಿಂದಲ್ಲ ಎಂದು ಟಾಂಗ್ ಕೊಟ್ಟರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಉತ್ಸವ ಎರಡು ದಿನ ಚೆನ್ನಾಗಿ ನಡೆದಿದೆ, ಕೊನೆಯ ಹಂತದಲ್ಲಿ ಗೊಂದಲ ಬೇಡ, ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.
