ದಾವಣಗೆರೆ : ಜಿಲ್ಲೆಯ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ನ್ಯೂ ಇಯರ್ ಆಚರಣೆ ರಂಗೇರಿತ್ತು. ಕೇಕ್ ಕತ್ತರಿಸಿ ಬಾಯಿ ಸಿಹಿ ಮಾಡಿಕೊಂಡರು. ಹಾಡಿ, ಕುಣಿದು ಸಂತೋಷದಿಂದ ಕಾಲ ಕಳೆದರು. ನೂತನ ವರ್ಷದ ಮೊದಲ ದಿನವಾದ ಬುಧವಾರ ಸಾರ್ವಜನಿಕರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪೂಜೆ ಸಲ್ಲಿಸಿ ಹೊಸ ವರ್ಷ ನೆಮ್ಮದಿಯಿಂದ ಕಳೆಯಲಿ ಎಂದು ಪ್ರಾರ್ಥಿಸಿದರು. ಜಿಲ್ಲೆಯ ಪ್ರವಾಸಿ ತಾಣಗಳಾದ ಚನ್ನಗಿರಿ ತಾಲೂಕಿನ ಸೂಳೆಕೆರೆ, ಸಂತೇಬೆನ್ನೂರು ಪುಷ್ಕರಣಿ, ಹರಿಹರೇಶ್ವರ ದೇವಸ್ಥಾನ, ಹರಿಹರದ ತುಂಗಭದ್ರಾ ನದಿ ತೀರ, ಕೊಂಡಜ್ಜಿ ಕೆರೆ ಇನ್ನಿತರ ಸ್ಥಳಗಳಿಗೆ ತೆರಳಿ ಖುಷಿಯಿಂದ ಹೊಸ ವರ್ಷಾಚರಣೆ ಮಾಡಿದರು. ನಗರದ ಗಾಜಿನ ಮನೆಗೆ ಒಂದೇ ದಿನ 10 ಸಾವಿರ ಜನರು ಭೇಟಿ ನೀಡಿದ್ದರು. ಅಲ್ಲಿ ಫಲ ಪುಷ್ಪ ಪ್ರದರ್ಶನ ಆಯೋಜನೆ ಮಾಡಿರುವುದರಿಂದ ಜನರ ಸಂಖ್ಯೆ ಜಾಸ್ತಿಯಾಗಿತ್ತು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದರು. ವಿಶ್ವೇಶ್ವರಯ್ಯ ಪಾರ್ಕ್, ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯಕ್ಕೂ ಜನರು ಭೇಟಿ ಕೊಟ್ಟಿದ್ದರು. ಅಲ್ಲಿಯೇ ಊಟ ಸೇವಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹೊಸ ವರ್ಷ ಎಂದ ಮೇಲೆ ಕೇಕ್ ಖರೀದಿ ಜೋರಾಗಿಯೇ ಇರುತ್ತದೆ. ಜನರು ಬೇಕರಿಗಳಿಗೆ ತೆರಳಿ ತಮಗೆ ಇಷ್ಟವಾದ ಫ್ಲೇವರ್‌ನ ಕೇಕ್ ಖರೀದಿಸುವುದು ಸಾಮಾನ್ಯವಾಗಿತ್ತು. ಗ್ರಾಹಕರನ್ನು ಆಕರ್ಷಿಸಲು ಅಂಗಡಿಗಳಿಗೆ ವಿದ್ಯುದ್ದೀಪಗಳಿಮದ ಅಲಂಕಾರ ಮಾಡಲಾಗಿತ್ತು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಕ್‌ಗಳ ಮಾರಾಟ ಸಮಾಧಾನಕರವಾಗಿತ್ತು. ಪ್ರತಿ ದಿನ ಮಾಡುವ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚು ಕೇಕ್‌ಗಳನ್ನು ತಯಾರಿಸಿದ್ದೆವು. ಆದರೂ ಈ ಹಿಂದಿನ ದಿನಗಳಿಗೆ ಹೋಲಿಸಿದರೆ ವ್ಯಾಪಾರ ಅಷ್ಟಕ್ಕಷ್ಟೇ ಎಂದು, ನಗರದ ಕೃಷ್ಣ ಬೇಕರಿಯ ಕೆ. ನರಸಿಂಹನ್ ತಿಳಿಸಿದರು. … (ಬಾಕ್ಸ್) ನಾಲ್ಕು ಕೋಟಿ ಮದ್ಯದ ವಹಿವಾಟು? ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 3 ರಿಂದ 4 ಕೋಟಿ ರೂ.ಗಳಷ್ಟು ಮದ್ಯದ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ 3-4 ಸಾವಿರ ಪೆಟ್ಟಿಗೆ (ಕೇಸ್) ಬಿಯರ್ ಹಾಗೂ 2 ಸಾವಿರದಿಂದ 2500 ಪೆಟ್ಟಿಗೆ ಮದ್ಯ ಮಾರಾಟವಾಗುತ್ತಿತ್ತು. ಆದರೆ ಹೊಸ ವರ್ಷದ ಕಾರಣಕ್ಕೆ ದುಪ್ಪಟ್ಟು ವ್ಯಾಪಾರ ಆಗಿದೆ ಎನ್ನಲಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳು ಗ್ರಾಹಕರಿಂದ ತುಂಬಿ ತುಳುಕಿದವು. ಕ್ಲಬ್, ಗೆಸ್ಟ್‌ಹೌಸ್‌ಗಳಲ್ಲಿ, ಹೈವೇ ಪಕ್ಕದ ಢಾಬಾಗಳು, ಮಿಲ್ಟ್ರಿ ಹೋಟೆಲ್‌ಗಳಲ್ಲೂ ಉತ್ತಮ ವ್ಯಾಪಾರವಾಗಿದೆ. ರಾಜ್ಯ ಪಾನೀಯ ನಿಗಮದ ಡಿಪೋದಿಂದ ಮದ್ಯದಂಗಡಿಯವರು 7.26 ಕೋಟಿ ರೂ. ಮೌಲ್ಯದ 17,196 ಪೆಟ್ಟಿಗೆ ಮದ್ಯ, 67.33 ಲಕ್ಷ ರೂ. ಮೌಲ್ಯದ 3811 ಪೆಟ್ಟಿಗೆ ಬಿಯರ್ ಖರೀದಿಸಿದ್ದಾರೆ. ಆದರೆ ಖಚಿತವಾಗಿ ಎಷ್ಟು ಮಾರಾಟವಾಗಿದೆ ಎಂಬ ಮಾಹಿತಿ ಬಂದಿಲ್ಲ ಎಂದು ಅಬಕಾರಿ ಉಪ ಆಯುಕ್ತ ಚಿದಾನಂದ್ ಜನಾಯ್ ತಿಳಿಸಿದರು. ಕೆಲವು ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ವ್ಯವಸ್ಥಿತವಾಗಿ ಹೊಸ ವರ್ಷಾಚರಣೆಯ ಇವೆಂಟ್‌ಗಳನ್ನು ಮಾಡಲಾಯಿತು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಹಾಡು, ಕುಣಿತದ ಜತೆಗೆ ಊಟ, ಪಾನೀಯದ ಏರ್ಪಾಟು ಮಾಡಲಾಗಿತ್ತು.
