ದಾವಣಗೆರೆ : ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಯಾತ್ರೆ ಮಾಡುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿರುವುದನ್ನು ಸ್ವಾಗತಿಸುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಡೆದ ಮನಸ್ಸುಗಳನ್ನು ಒಂದು ಮಾಡುವುದು ಒಳ್ಳೆಯ ವಿಚಾರವೇ ಆಗಿದೆ ಎಂದು ಪ್ರತಿಕ್ರಿಯಿಸಿದರು. ನಾವು ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧವಾಗಿದ್ದೇವೆ. ದೆಹಲಿಯಲ್ಲಿ ಎಎಪಿ ಹೀನಾಯವಾಗಿ ಸೋಲಲು ಅವರ ಭ್ರಷ್ಟಾಚಾರವೇ ಕಾರಣವಾಗಿದೆ. ಆದ್ದರಿಂದ ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ವ್ಯವಸ್ಥೆ ಬರಬೇಕಿದೆ ಎಂದು ತಿಳಿಸಿದರು. ಮಾಧ್ಯಮಗಳಲ್ಲಿ ವಿಜಯೇಂದ್ರ ಪರವಾಗಿ, ನಮ್ಮ ವಿರುದ್ಧವಾಗಿ ವರದಿಗಳು ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು ಸಿಗುತ್ತಾರೋ ಇಲ್ಲವೋ ಎನ್ನುವುದನ್ನು ನಿಮಗೇಕೆ ಹೇಳಲಿ?. ನಾವು ದೆಹಲಿಗೆ ಹೋಗುತ್ತೇವೆ, ನಮ್ಮ ಪ್ರಯತ್ನ ಮಾಡುತ್ತೇವೆ. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿಯಾಗಲು ನಾನೂ ಅರ್ಹನಿದ್ದೇನೆ ಎಂದು ಹೇಳಿದರು. ದಾವಣಗೆರೆಯಲ್ಲಿ ಎರಡು ಹಂದಿಗಳಿವೆ. ಹಾದಿ ಬೀದಿಯಲ್ಲಿ ಮಾತನಾಡುವ ಅವರಿಗೆ ನಾನೇಕೆ ಉತ್ತರ ನೀಡಲಿ ಎಂದು ಬಿ.ವೈ. ವಿಜಯೇಂದ್ರ ಬಣದ ಇಬ್ಬರು ಮುಖಂಡರ ವಿರುದ್ಧ ಅವರ ಹೆಸರು ಹೇಳದೇ ಹರಿಹಾಯ್ದರು.
