ವಿಶ್ವಕರ್ಮ ಕೌಶಲ ಹಾಗೂ ಸಾಂಪ್ರದಾಯಕ ಕಲೆ ಉಳಿಸಲು ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎಂದು ಧಾರವಾಡ ಜಿಲ್ಲಾ ನಿವೃತ್ತ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ವಿಶ್ವಕರ್ಮ ಸಮಾಜದಿಂದ ನಗರದ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ವಿಶ್ವಕರ್ಮ ಸಮಾಜದ ಮಕ್ಕಳಿಗೆ ತಮ್ಮ ವೃತ್ತಿಗಳಲ್ಲಿ ಹೆಚ್ಚಿನ ಪರಿಣಿತಿ ಪಡೆಯಲು ಹೊಸ ಕೋರ್ಸ್‌ಗಳ ಆರಂಭಿಸುವ ಜತೆಗೆ ತರಬೇತಿ ಶಿಬಿರ ನಡೆಸಬೇಕು. ಇದಕ್ಕಾಗಿ ಸಮಾಜವು ಸಂಘಟನೆಗೊಂಡು ಸರ್ಕಾರದ ಮುಂದೆ ಹಕ್ಕು ಪ್ರತಿಪಾದಿಸಬೇಕು ಎಂದು ತಿಳಿಸಿದರು. ಮೂರ್ತಿ ಶಿಲ್ಪ ಹಾಗೂ ದೇವಾಲಯ ಶಿಲ್ಪಗಳು ವಿಶ್ವಕರ್ಮ ಸಮಾಜದ ಅಸ್ಮಿತೆ. ಪ್ರಸಕ್ತ ದಿನಗಳಲ್ಲಿ ಇವು ಅವಗಣನೆಗೆ ಗುರಿಯಾಗಿವೆ. ಅಸ್ಮಿತೆ ಉಳಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಗೌರವ ಲಭಿಸಲಿದ್ದು, ಸಮಾಜದ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು. ವಿಶ್ವಕರ್ಮ ಪರಂಪರೆ ಜಗತ್ತಿನ ಸವಾಂಗೀಣ ಪ್ರಗತಿಗೆ ಕಾರಣವಾಗಿದೆ. ತಮ್ಮ ಮಕ್ಕಳಿಗೆ ಯಾವುದೇ ಶಿಕ್ಷಣ ನೀಡಿದರೂ ಅದು ಸಮಾಜದ ಕೌಶಲಗಳು ಒಳಗೊಂಡಿರಬೇಕು. ಸಾಂಪ್ರದಾಯಕ ಕಲೆಗಳು ಮೊಟಕುಗೊಳ್ಳದೆ ಮುಂದಿನ ಪರಂಪರೆಗೆ ಜೀವಂತವಾಗಿ ಉಳಿಯಬೇಕು ಎಂದು ಹೇಳಿದರು. ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾನಂದ ಮಾತನಾಡಿ, ಸರ್ಕಾರ ವಿಶ್ವಕರ್ಮ ಜಯಂತಿ ಆಚರಣೆ ಘೋಷಿಸಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗುತ್ತಿರುವುದು ಸಮಾಜಕ್ಕೆ ಬೇಸರ ತರಿಸಿದೆ ಎಂದು ತಿಳಿಸಿದರು. ಸಮಾಜ ಸಂಘಟನೆ ಜತೆಗೆ ಹಕ್ಕುಗಳ ನಿವೇದನೆ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಯಾವುದೇ ರೀತಿ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿರಬೇಕು ಎಂದರು. ಅಂತರವಳ್ಳಿ ಮಠದ ಭಾಸ್ಕರಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ಇದರಿಂದ ಸಮಾಜ ಬಹಳಷ್ಟು ಹಿಂದುಳಿದಿದೆ. ಸಮಾಜವು ಒಗ್ಗಟ್ಟಿನಿಂದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಪಂ ಎಪಿಒ ಆನಂದ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್, ಗೌರವಾಧ್ಯಕ್ಷ ಪೂರ್ವಾಚಾರ್, ಉಪಾಧ್ಯಕ್ಷ ಸಿದ್ದಾಚಾರ್, ಹಾಸ್ಟೆಲ್ ಉಪಾಧ್ಯಕ್ಷ ಪರಮೇಶ್ವರಾಚಾರ್ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ಜಗನ್ನಾಥ್ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಾರೋಟ್‌ನಲ್ಲಿ ಭಗವಾನ್ ವಿಶ್ವಕರ್ಮ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಪೂರ್ಣಕುಂಭ, ಸಮಾಳ, ನಂದಿಕೋಲು, ವಾದ್ಯಮೇಳಗಳು ಮೆರುಗು ನೀಡಿದವು. ಡಿಜೆ ಹಾಡುಗಳಿಗೆ ಯುವಕರು ಹೆಜ್ಜೆಹಾಕಿದರು.
ವಿಶ್ವಕರ್ಮ ಕೌಶಲ ಉಳಿಸಲು ಬೇಕು ವಿಶ್ವವಿದ್ಯಾಲಯ
Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…
ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…
ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…
ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…
Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..
ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan) ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…