ಸತಿ-ಪತಿಗಳಲ್ಲಿ ಇರಬೇಕು ತಾಳ್ಮೆ

ದಾವಣಗೆರೆ: ವಿಜಯದಶಮಿ ಹಬ್ಬದ ಅಂಗವಾಗಿ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನಿಂದ ಶನಿವಾರ ದೇಗುಲದ ಆವರಣದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. 20 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಟ್ರಸ್ಟ್ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾಂಪತ್ಯ ಜೀವನದಲ್ಲಿ ಸತಿ ಪತಿ ಇಬ್ಬರಲ್ಲೂ ಹೊಂದಾಣಿಕೆ, ತಾಳ್ಮೆ ಅತ್ಯವಶ್ಯಕ. ಒಬ್ಬರಿಗೆ ಸಿಟ್ಟು ಬಂದಾಗ ಮತ್ತೊಬ್ಬರು ಸಮಾಧಾನದಿಂದ ಇರುವ ಗುಣ ರೂಢಿಸಿಕೊಳ್ಳಬೇಕು. ಆಗ ದಾಂಪತ್ಯ ಕಲಹ ಬರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದಂಪತಿಗಳು ಪ್ರೀತಿ ಸಾಮರಸ್ಯ ಹಾಗೂ ಅನ್ಯೋನ್ಯತೆಯ ಜೀವನ ನಡೆಸಬೇಕು. ದಸರಾ ಸಂದರ್ಭದಲ್ಲಿ ಸಾಮೂಹಿಕ ವಿವಾಹದ ಬಂಧನಕ್ಕೆ ಒಳಗಾದವರಿಗೆ ದೇವಿ ಕೃಪೆ ಒಲಿಯಲಿದೆ ಎಂದರು.

ಎಸ್ಸೆಸ್ ಅವರ ನೇತೃತ್ವದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ, ಮೆರವಣಿಗೆ ನಡೆಯುತ್ತಿವೆ. ದೇವಸ್ಥಾನಕ್ಕೆ ದಾವಣಗೆರೆ ಮಾತ್ರವಲ್ಲದೆ ನೆರೆಹೊರೆಯ ಭಕ್ತರು ಬರುತ್ತಾರೆ. ಧಾರ್ಮಿಕ ಮಾರ್ಗದಲ್ಲಿ ಎಲ್ಲರೂ ನಡೆದರೆ ದೇವಿ ಕಾಲಕಾಲಕ್ಕೆ ಮಳೆ, ಬೆಳೆಯನ್ನು ನೀಡುತ್ತಾಳೆ. ಇದರಿಂದ ರೈತರ ಬದುಕು ಹಸನಾಗಿ ದೇಶ ಸುಭಿಕ್ಷೆಯಿಂದ ಕೂಡಿರಲಿ ಎಂದು ಆಶಿಸಿದರು.

ಟ್ರಸ್ಟ್‌ನ ಸದಸ್ಯರಾದ ಗೌಡ್ರ ಚನ್ನಬಸಪ್ಪ, ಎಚ್.ಬಿ.ಗೋಣೆಪ್ಪ, ಹನುಮಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣ, ಉಮೇಶ್ ಸಾಳಂಕಿ, ಗುರುರಾಜ್, ಪಾಲಿಕೆ ಸದಸ್ಯ ತಿಪ್ಫಣ್ಣ ಮತ್ತಿತರರಿದ್ದರು. ಇದೇ ವೇಳೆ ಶ್ರೀ ಕಳಸದ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.