ಸಂಶೋಧನೆಗಳು ಪದೋನ್ನತಿಗೆ ಸೀಮಿತ

ದಾವಣಗೆರೆ: ಸಂಶೋಧನೆಗಳು ಜೀವಪರ ಚಿಂತನೆ ಮುಕ್ತವಾಗಿ, ಉದ್ಯೋಗ ಪ್ರಾಪ್ತಿ, ಪದೋನ್ನತ್ತಿಗೆ ಸೀಮಿತವಾಗುತ್ತಿವೆ ಎಂದು ನ್ಯಾಕ್ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಕಳವಳ ವ್ಯಕ್ತಪಡಿಸಿದರು.

ದಾವಣಗೆರೆ ವಿವಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 6ನೇ ಘಟಿಕೋತ್ಸವದಲ್ಲಿ ಮಾತನಾಡಿದರು.

ಅಂತಾರಾಷ್ಟ್ರೀಯ ಸಂಶೋಧನೆ ಪ್ರಕಟಣೆಗಳಲ್ಲಿ ದೇಶದ ಲೇಖನಗಳ ಸಂಖ್ಯೆ ಕುಸಿಯುತ್ತಿದೆ. ಸಂಶೋಧನೆಗಳು ಜೀವಪರವಾಗಿದ್ದರೆ ಮಾತ್ರ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆಯುತ್ತವೆ ಎಂದರು.

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಸ್.ವಿ. ಹಲಸೆ ಮಾತನಾಡಿ, 2017-18ನೇ ಸಾಲಿನಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿಗೆ ಕ್ರಮವಾಗಿ 10,648 ಹಾಗೂ 1,895 ವಿದ್ಯಾರ್ಥಿಗಳು ಅರ್ಹರಾಗಿದ್ದು, 32 ವಿದ್ಯಾರ್ಥಿಗಳು 62ಚಿನ್ನದ ಪದಕ ಪಡೆದಿದ್ದಾರೆ ಎಂದರು.

ಖ್ಯಾತ ವೈದ್ಯ ಡಾ.ಎಸ್.ಎಂ. ಎಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದರು. ರ‌್ಯಾಂಕ್ ವಿಜೇತರಿಗೆ ಪದವಿ ಪ್ರದಾನ, ಪದಕ, ಪ್ರಮಾಣಪತ್ರ ವಿತರಿಸಲಾಯಿತು.

ಕುಲಾಧಿಪತಿ ವಜುಭಾಯಿ ರುಡಾಭಾಯಿ ವಾಲಾ, ಸಮಕುಲಾಧಿಪತಿ ಜಿ.ಟಿ. ದೇವೇಗೌಡ ಅನುಪಸ್ಥಿತಿ ಹಿನ್ನೆಲೆ ಕುಲಪತಿ ಪ್ರೊ.ಎಸ್.ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಪತಿಗಳಾದ ಪ್ರೊ.ಪಿ. ಕಣ್ಣನ್, ಪ್ರೊ.ಬಸವರಾಜ ಬಣಕಾರ, ಸಿಂಡಿಕೇಟ್ ಸದಸ್ಯರು, ವಿವಿಧ ವಿಭಾಗಗಳ ಡೀನ್‌ಗಳು ಉಪಸ್ಥಿತರಿದ್ದರು.