ದಾವಣಗೆರೆ : ಉತ್ಥಾನ ದ್ವಾದಶಿ ದಿನವಾದ ಬುಧವಾರ, ಜಿಲ್ಲಾದ್ಯಂತ ತುಳಸಿ ವಿವಾಹವನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಮನೆ ಮುಂದಿನ ತುಳಸಿ ಗಿಡಕ್ಕೆ ಅರಿಷಿಣ, ಕುಂಕುಮ, ಗೆಜ್ಜೆವಸ್ತ್ರ, ಹೂವು, ಕಬ್ಬು, ಬೆಟ್ಟದ ನೆಲ್ಲಿಕಾಯಿಯ ಟೊಂಗೆ, ಹುಣಸೆ ಗಿಡದ ಟೊಂಗೆ ಇಟ್ಟು, ಹೂವು ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು. ಶೋಡಷೋಪಚಾರಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ದಾಮೋದರ ರೂಪಿಯಾದ ಶ್ರೀಕೃಷ್ಣ ಮತ್ತು ತುಳಸಿಯ ವಿವಾಹವನ್ನು ಮಂಗಳಾಷ್ಟಕ ಪಠಣದೊಂದಿಗೆ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಹಬ್ಬದ ಆಚರಣೆಯಲ್ಲಿ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡರು. ನೆರೆಹೊರೆಯ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಅರಿಷಿಣ, ಕುಂಕುಮ ನೀಡಿದರು. ಮನೆಗಳ ಮುಂದೆ ದೀಪಗಳ ಸಾಲು ಕಂಡುಬಂದಿತು. ಇದೇ ವೇಳೆ ಪಟಾಕಿಗಳ ಸದ್ದೂ ಕೇಳಿಬಂದಿತು. ನಗರದ ಕೆಬಿ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಬ್ಬದ ಸಡಗರವಿತ್ತು. ತಾಲೂಕುಗಳಲ್ಲೂ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನಗಳು ಮತ್ತು ಮಠಗಳಲ್ಲಿಯೂ ತುಳಸಿ ವಿವಾಹವನ್ನು ಭಕ್ತರ ಸಮ್ಮುಖದಲ್ಲಿ ಆಚರಿಸಲಾಯಿತು. ಭಾರತದಲ್ಲಿ ಆಚರಿಸಲಾಗುವ ಅನೇಕ ಹಬ್ಬಗಳಲ್ಲಿ ತುಳಸಿ ಹಬ್ಬವು ಶ್ರೇಷ್ಠವಾದುದು ಎಂದು ಪಂಡಿತರಾದ ಗೋಪಾಲಾಚಾರ್ ಮಣ್ಣೂರು ಹೇಳಿದರು. ಹಬ್ಬದ ಮಹತ್ವ, ವಿಶೇಷತೆಯ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿ, ಕಾರ್ತಿಕ ಮಾಸದ ಶುಕ್ಲ ಪಕ್ಷ, ದ್ವಾದಶಿ ದಿನದಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ತುಳಸಿ ದೇವಿಯನ್ನು ಗಿಡದ ರೂಪದಲ್ಲಿ ಪೂಜಿಸುವ ಪದ್ಧತಿಯು ಸಾವಿರಾರು ವರ್ಷಗಳಿಂದ ದೇಶದಲ್ಲಿ ಆಚರಿಸಿಕೊಂಡು ಬರಲಾಗಿದೆ ಎಂದು ವಿವರಿಸಿದರು. ತುಳಸಿ ಗಿಡವು ಶ್ರೀಮನ್ನಾರಾಯಣನ ಅವತಾರವಾದ ಧನ್ವಂತರಿಯ ಆನಂದಬಾಷ್ಪದಿಂದ ಅಮೃತ ಕಲಶದಲ್ಲಿ ಉದ್ಭವಿಸಿದ ಸಕಲ ಔಷಧಗಳ ಗಿಡವಾಗಿದೆ ಎಂದು ತಿಳಿಸಿದರು. ತುಳಸಿ ಗಿಡದ ಎಲ್ಲ ಕಾಂಡ, ಎಲೆ, ಬೀಜ, ಬೇರು ಸೇರಿದಂತೆ ಅದರ ಎಲ್ಲ ಭಾಗಗಳೂ ಔಷಧೀಯ ಗುಣವನ್ನು ಹೊಂದಿವೆ. ಪ್ರತಿ ದಿನ ಪ್ರಾತಃ ಕಾಲದಲ್ಲಿ ಯಾರು ಒಂದು ತುಳಸಿ ದಳವನ್ನು ತಿಂದು ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅವರು ಯಾವುದೇ ಅನಾರೋಗ್ಯಕ್ಕೆ ಒಳಗಾಗದೇ ಸುಖಕರವಾದ ಸ್ವಸ್ಥ ಜೀವನವನ್ನು ನಡೆಸುತ್ತಾರೆ ಎಂದು ಹೇಳಿದರು.
ಜಿಲ್ಲಾದ್ಯಂತ ತುಳಸಿ ವಿವಾಹದ ಸಂಭ್ರಮ
ಬ್ರೆಡ್ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್; ಇಲ್ಲಿದೆ ಸಿಂಪಲ್ ವಿಧಾನ | Recipe
ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…
ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe
ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…
ಬಹಳ ಇಷ್ಟಪಟ್ಟು ಪನೀರ್ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips
ನಾನ್ವೆಜ್ ಇಷ್ಟಪಡದವರು ಪ್ರೋಟೀನ್ಗಾಗಿ ಪನೀರ್ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…