ಹುಡುಗನ ವೇಷ ಧರಿಸಿ ಕಳ್ಳತನ ಮಾಡುತ್ತಿದ್ದ ‘ಅವನಲ್ಲ ಅವಳು’

ದಾವಣಗೆರೆ: ಹುಡುಗನ ವೇಷ ಹಾಕಿಕೊಂಡು‌ ಸಾರ್ವಜನಿಕರ ಜೇಬಿಗೆ ಕತ್ತರಿ‌ ಹಾಕುತ್ತಿದ್ದ ಚಾಲಾಕಿ ಬಾಲಕಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಘಟನೆ ನಡೆದಿದ್ದು, ಈ ಬಾಲಕಿ ಬೇಕರಿಯೊಂದರಲ್ಲಿ ಕ್ಷಣಾರ್ಧದಲ್ಲಿ ಜನರ ಜೇಬಿಗೆ ಕತ್ತರಿ ಹಾಕಿ ಹಣ ಎಗ್ಗರಿಸುತ್ತಿದ್ದಳು ಎಂದು ತಿಳಿದು ಬಂದಿದೆ.

ಒಂದು ವಾರದಿಂದ ಈ ರೀತಿ ಹುಡುಗರಂತೆ ಪ್ಯಾಂಟು, ಶರ್ಟ್, ಶೂ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದಳು ಇವಳ ಜತೆ ಒಂದು ಮೂರ್ನಾಲ್ಕು ಅಪ್ರಾಪ್ತರ ಗ್ಯಾಂಗ್​ ಇದೆ. ಕೈಯಲ್ಲಿ ಕವರ್ ಹಿಡಿದುಕೊಂಡು ಜೇಬಿಗೆ ಕತ್ತರಿ ಹಾಕುತ್ತಿದ್ದಳು ಎಂದು ಜಗಳೂರು ಪಟ್ಟಣದ ಇಶಾನ್ ಬೇಕರಿ ಮಾಲೀಕ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಬಾಲಕನೊಬ್ಬನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಿನ್ನೆ ಬಾಲಕಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇವೆಲ್ಲವನ್ನೂ ನೋಡಿದ ಮೇಲೆ ಮರುದಿನ ಅವರನ್ನು ನಾವು ಗಮನಿಸುತ್ತಿದ್ದೆವು. ಕಳ್ಳತನಕ್ಕೆ ಹೊಂಚು ಹಾಕಿ, ತಪ್ಪಿಸಿಕೊಂಡು ಹೋಗುತ್ತಿದ್ದಾಗ ನಾನೇ ಹಿಡಿದುಕೊಂಡು ಬಂದೆ. ನಂತರ ಅದು ಹುಡುಗ ಅಲ್ಲ ಹುಡುಗಿ ಎಂದು ತಿಳಿಯಿತು ಎಂದರು.

ಹಾಸನ ಜಿಲ್ಲೆಯ ಅರಸೀಕೆರೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಬಾಲಕಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಗಳೂರಿನಲ್ಲಿ ಪ್ರಕರಣ ದಾಖಲಾಗದ ಹಿನ್ನೆಲೆ ಬಾಲಕಿಯನ್ನ ಅರಸೀಕೆರೆ ಠಾಣೆಗೆ ಒಪ್ಪಿಸಲಾಗಿದೆ. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *