ಕುಡಿಯುವ ನೀರಿನ ಕೆಲಸಗಳಿಗೆ ಆದ್ಯತೆ ನೀಡುವಂತೆ ಪಿಡಿಒಗಳಿಗೆ ದಾವಣಗೆರೆ ಉತ್ತರ ಶಾಸಕ ರವೀಂದ್ರನಾಥ್ ಸೂಚನೆ

ದಾವಣಗೆರೆ: ತಾಲೂಕಿನಲ್ಲಿ ಜನ ಮತ್ತು ಜಾನುವಾರುಗಳಿಗೆ ನೀರಿನ ಹಾಹಾಕಾರವಾಗದಂತೆ ಕ್ರಮ ವಹಿಸಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ದಾವಣಗೆರೆ ತಾಪಂ ಸಭಾಂಗಣದಲ್ಲಿ ಶನಿವಾರ ಉದ್ಯೋಗಖಾತ್ರಿ ಹಾಗೂ ಗ್ರಾಮ ವಿಕಾಸ್ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಗ್ರಾಮದಲ್ಲೂ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಜಾನುವಾರುಗಳಿಗೆ ನೀರು ಕೊಡಬೇಕು. ತೊಟ್ಟಿಗಳಿಲ್ಲದ ಕಡೆಗಳಲ್ಲಿ ಹೊಸದಾಗಿ ನಿರ್ಮಿಸಬೇಕು. ಮಾಯಕೊಂಡ ಕ್ಷೇತ್ರದ ಗ್ರಾಮಗಳ ನೀರಿನ ಸಮಸ್ಯೆ ನಿರ್ಲಕ್ಷಿಸದೆ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಹೇಳಿದರು.

ಎಲ್ಲ ಗ್ರಾಮ, ಅಂಗನವಾಡಿಗಳಲ್ಲಿ ಶೌಚಗೃಹ, ಅಡುಗೆ ಕೋಣೆ ನಿರ್ಮಿಸಬೇಕು. ದುರಸ್ತಿಯಲ್ಲಿರವ ಕಟ್ಟಡಗಳನ್ನು ಸರಿಪಡಿಸಬೇಕು ಎಂದೂ ಸೂಚಿಸಿದರು.

ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಉಪಾಯುಕ್ತ ರವೀಂದ್ರ ಮಾತನಾಡಿ, ಮಾಯಕೊಂಡ ಕ್ಷೇತ್ರದಲ್ಲಿ ಒಂದು ಗ್ರಾಮಕ್ಕೆ ಖಾಸಗಿ ಬೋರ್‌ವೆಲ್ ಹಾಗೂ 17 ಗ್ರಾಮ, ಹೆಬ್ಬಾಳು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೂ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಕಾಟಿಹಳ್ಳಿ, ಹುಣಸೇಕಟ್ಟೆ ಗ್ರಾಮಗಳಿಗೆ ಶುದ್ಧ ಕುಡಿವ ನೀರಿನ ಘಟಕಗಳಿಗೂ ಸಹ ಟ್ಯಾಂಕರ್ ನೀರು ಸರಬರಾಜಾಗುತ್ತಿದೆ ಎಂದರು.

ಹೊಸದಾಗಿ 12 ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಮತ್ತೆ 37 ಬೋರ್‌ವೆಲ್‌ಗಳನ್ನು ಕೊರೆಸಲು ಕ್ರಿಯಾಯೋಜನೆ ರೂಪಿಸಿದ್ದರೂ ಮಳೆಗಾಲದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೈಬಿಡಲಾಗಿದೆ. ಕಕ್ಕರಗೊಳ್ಳ ಆಂಜನೇಯ ಬಡಾವಣೆಯ ಬೋರ್‌ವೆಲ್‌ನಲ್ಲಿ ನೀರು ಲಭಿಸಿದ್ದರೂ ಅದಕ್ಕೆ ಹಳೇ ಮೋಟಾರ್ ಮತ್ತು ಪಂಪ್‌ಸೆಟ್ ಇಳಿಸಲು ವಿರೋಧವಿದೆ. ಹೊಸ ಮೋಟಾರ್ ಖರೀದಿಗೆ ಹಣವಿಲ್ಲ ಎಂದು ಸಭೆಗೆ ತಿಳಿಸಿದರು.

ತಾಪಂ ಪ್ರಭಾರ ಇಒ ರೇವಣಸಿದ್ದನಗೌಡ ಮಾತನಾಡಿ, ಜನರಿಗೆ ದಿನಕ್ಕೆ ಅಂದಾಜು 40 ಲೀ., ಜಾನುವಾರುಗಳಿಗೆ 50 ಲೀಟರ್‌ನಂತೆ ನೀರು ಪೂರೈಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಎಲ್ಲ ಶಾಲೆ, ಶೌಚಗೃಹಗಳ ದುರಸ್ತಿಗೆ ಹಣ ಮಂಜೂರು ಮಾಡಲಾಗಿತ್ತು. ಅಂಗನವಾಡಿ ಶೌಚಗೃಹ ಮತ್ತು ಅಡುಗೆ ಮನೆಗಳ ರಿಪೇರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾಡಜ್ಜಿ, ಕಂದಗಲ್ಲು, ಎಲೆಬೇತೂರು, ಗೋಪನಾಳು, ಆವರಗೊಳ್ಳ, ಕಕ್ಕರಗೊಳ್ಳ, ದೊಡ್ಡಬಾತಿ ಹಾಗೂ ಅತ್ತಿಗೆರೆ ಗ್ರಾಪಂ ಪಿಡಿಒಗಳು ಕಾಲುವೆಗೆ ನೀರು ಬಂದ ತಕ್ಷಣ ಕೊನೆಭಾಗದ ಎಲ್ಲ ಕಾಲುವೆಗಳ ಹೂಳೆತ್ತಿ ಸ್ವಚ್ಛಗೊಳಿಸಬೇಕೆಂದು ಶಾಸಕರು ಸೂಚಿಸಿದರು.

ಎಲ್ಲಾ ಗ್ರಾಪಂನಲ್ಲಿ ಜಿಪಿಎಸ್ ಮಾಡಿ ಎರಡು ತಿಂಗಳಿಗೂ ಹೆಚ್ಚು ಕಾಲ ಆಶ್ರಯ ಮನೆಗಳ ಹಣ ಬಿಡುಗಡೆಯಾಗದಿದ್ದಲ್ಲಿ ಮಾಹಿತಿ ನೀಡಬೇಕು. ಅವುಗಳನ್ನು ಪರಿಶೀಲಿಸಿ ಹಣ ಮಂಜೂರು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು. ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷ ಎಚ್.ಆರ್. ಮರುಳಸಿದ್ದಪ್ಪ ಇದ್ದರು.

Leave a Reply

Your email address will not be published. Required fields are marked *