More

  ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ

  ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ
   ಮಕ್ಕಳ ಪ್ರತಿಭೆ ಹೊರಹೊಮ್ಮಿದರೆ ಸಾಧನೆ ಸಾಧ್ಯ
   ವಿಜಯವಾಣಿ ಸುದ್ದಿಜಾಲ ದಾವಣಗೆರೆ
   ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥೈರ್ಯ ಇಮ್ಮಡಿಗೊಂಡು ಸಾಧನೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
   ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಬಾಡಾ ಕ್ರಾಸ್‌ನ ಜೈನ್ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾವಣಗೆರೆ ದಕ್ಷಿಣ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
   ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣ ಹಾಗೂ ಉತ್ತೇಜನ ನೀಡುವುದು ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜನೆಯ ಪ್ರಮುಖ ಆಶಯವಾಗಿದೆ. ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ಅವರಲ್ಲಿನ ಪ್ರತಿಭೆ ಹೊರಹಾಕಿ ವಿಕಾಸ ಹೊಂದಲು ಸಹಾಯ ಮಾಡುವುದು ಮಹತ್ತರ ಕಾರ್ಯ ಎಂದು ತಿಳಿಸಿದರು.
   ಇಂದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಡುವುತ್ತಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.
   ಪರೀಕ್ಷೆ ಮತ್ತು ಅಂಕಕ್ಕಾಗಿ ಮಾತ್ರ ಅಧ್ಯಯನ ಸೀಮಿತವಾಗಿದ್ದು, ವಿದ್ಯಾರ್ಥಿಗಳು ಆ ಮಿತಿಯನ್ನು ದಾಟಿ ಜ್ಞಾನಕ್ಕಾಗಿ ಓದು ಎಂಬ ನಿಟ್ಟಿನಲ್ಲಿ ಬೆಳೆಯಬೇಕು. ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕಿಂತ ಆಂಗ್ಲ ಮಾಧ್ಯಮದ ವ್ಯಾಸಂಗವೇ ಶ್ರೇಷ್ಠ ಎಂಬ ಭ್ರಮಾಲೋಕದಿಂದ ಹೊರಬಂದು ನಮ್ಮತನ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
   ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂಬ ನುಡಿಯಂತೆ, ಶಿಕ್ಷಣದ ಜತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದರೆ ಮಾತ್ರ ಜ್ಞಾನಾಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
   ಸಂವಿಧಾನದತ್ತವಾಗಿ ಪ್ರತಿ ಮಗುವೂ ಶಿಕ್ಷಣ ಹೊಂದುವ ಹಕ್ಕನ್ನು ಹೊಂದಿದ್ದು, ಪ್ರತಿ ಮಗುವಿಗೆ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ. ಪಾಲಕರು ಸರ್ಕಾರದ ಜತೆ ಕೈಜೋಡಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದಾಗ ಸರ್ಕಾರದ ಪ್ರಯತ್ನ ಕೈಗೂಡುತ್ತದೆ ಎಂದರು.
   ದಾವಣಗೆರೆ ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ನಟರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ. ಚೌಡಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗದ್ದಿಗೆಪ್ಪ, ಕಾರ್ಯದರ್ಶಿ ಪಿ.ಎಂ.ನಾಗರಾಜ್, ಜೆ.ಆರ್.ಶಿವಲಿಂಗಪ್ಪ, ಅಜ್ಜಣ್ಣ, ಕೆ.ಜಿ.ಗೌಡ್ರು, ಬಿಆರ್‌ಪಿ ಕವಿತಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts