ಬಿಸಿಲ ಧಗೆ ತಣಿಸಲು ಮಜ್ಜಿಗೆ

ಬಸವರಾಜ್ ಪಿ.ಬಾತಿ ದಾವಣಗೆರೆ
ಬಿಸಿಲಿನ ಬೇಗೆ ದಿನೇ ದಿನೆ ಏರಿಕೆಯಾಗುತ್ತಿದೆ. ಎಷ್ಟೇ ನೀರು ಕುಡಿದರೂ ಬಾಯಾರಿಕೆ ತಣಿಯದೆ ಬೆಣ್ಣೆ ನಗರದ ಜನ ತತ್ತರಿಸಿದ್ದಾರೆ.

ಮಜ್ಜಿಗೆ ನೀಡಿ ಜನರ ದಣಿವಾರಿಸಲು ವಿವಿಧ ಸಂಘ ಸಂಸ್ಥೆಗಳು, ಅಂಗಡಿಗಳ ಮಾಲೀಕರು ಅರವಟ್ಟಿಗೆ ಆರಂಭಿಸಿದ್ದಾರೆ. ಬೆಳಗ್ಗೆ 10 ಗಂಟೆಗೇ ಮನೆಯಿಂದ ಹೊರಬಾರದಷ್ಟು ತಾಪವಿರುತ್ತದೆ. ವಿಧಿಯಿಲ್ಲದೆ ಸರ್ಕಾರಿ ಕಚೇರಿ ಸೇರಿ ವಿವಿಧ ಕೆಲಸ, ಕಾರ್ಯಗಳಿಗೆ ದೂರದ ಹಳ್ಳಿಗರು ಅಲೆದಾಡುವ ಪರಿಸ್ಥಿತಿ ಇದೆ. ಈ ವೇಳೆ ಬಾಯಾರಿಕೆಯಾದರೆ ನೀರು ಸಿಗುವುದು ಕಷ್ಟ. ಹುಡುಕಿದರೂ ಕೆಲ ಕಚೇರಿಗಳಲ್ಲಿ ನೀರಿನ ವ್ಯವಸ್ಥೆಯೇ ಇರುವುದಿಲ್ಲ.

ಹೋಟೆಲ್‌ಗೆ ಹೋದರೆ ಏನಾದರೂ ಖರೀದಿಸುವ ಮಾತು ಕೇಳಿಬರುತ್ತದೆ. ಬೊಗಸೆ ನೀರು ಕುಡಿಯಲು ದುಬಾರಿ ತಂಪುಪಾನೀಯ ಕೊಂಡುಕೊಳ್ಳುವುದು ಆರ್ಥಿಕ ಹೊರೆ. ಇಂತಹ ಜನರ ಪಾಲಿಗೆ ‘ಅರವಟ್ಟಿಗೆ’ಗಳು ಬಾಯಾರಿಕೆ ನೀಗಿಸುವ ಜೀವಜಲದ ಸಂಜೀವಿನಿ ಪಾತ್ರೆಗಳಾಗಿವೆ.

40ರ ಗಡಿ ಹತ್ತಿರ ತಾಪಮಾನ: ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದಂತೆ ತಾಪವೂ ಹೆಚ್ಚಾಗುತ್ತದೆ. ತಾಪಮಾನ ಈಗಾಗಲೇ 40 ಡಿಗ್ರಿಯ ಗಡಿ ತಲುಪುವ ಹಂತಕ್ಕೆ ಬಂದಿದೆ. ಬರಿಗಾಲಿನಲ್ಲಿ ನಡೆದರೆ ಬರೆ ಹಾಕಿದ ಅನುಭವವಾಗುತ್ತಿದೆ. ಸೂರ್ಯನ ಪ್ರಖರತೆ ಜನರನ್ನು ಹೈರಾಣಾಗಿಸುತ್ತಿದೆ. ವಿಧಿಯಿಲ್ಲದೆ ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಅಲೆದಾಡುತ್ತಿದ್ದಾರೆ.

ದಿನಕ್ಕೆ ಒಂದೆರಡು ಬಾರಿ ಕ್ಯಾನ್‌ಗೆ ನೀರು ತುಂಬಿಸುತ್ತೇವೆ. ಜತೆಗೆ ಮನೆಯ ಮೇಲೆ ಪಕ್ಷಿಗಳಿಗೂ ಎರಡು ಪಾತ್ರೆಗಳಲ್ಲಿ ನೀರು ಇಟ್ಟಿರುತ್ತೇನೆ.
ಗಣಪತಿ ಗುಜ್ಜಾರ್
ಬಟ್ಟೆ ಅಂಗಡಿ ಮಾಲೀಕ

ಬಿಸಿಲ ಬೇಗೆ ಹೆಚ್ಚಿದೆ. ಹಣ ಕೊಟ್ಟು ನೀರಿನ ಬಾಟಲಿ ಖರೀದಿಸುವ ಸಾಮರ್ಥ್ಯ ನಮಗಿಲ್ಲ. ಕೆಲವರು ಅಲ್ಲಲ್ಲಿ ನೀರಿನ ಕ್ಯಾನ್ ಇಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಇದು ಬಡವರು, ಹಳ್ಳಿಗರಿಗೆ ಸಾಕಷ್ಟು ಪ್ರಯೋಜನವಾಗಿದೆ.
ಸಂತೋಷ್‌ಕುಮಾರ್ ಯುವಕ

ಸ್ವಯಂಪ್ರೇರಿತವಾಗಿ ಜಲದಾನ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸೇರಿ ವಿವಿಧ ಸಂಘ-ಸಂಸ್ಥೆಗಳು, ಅಂಗಡಿಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಾಯಾರಿಕೆ ತಣಿಸುವ ಕಾಯಕ ಮಾಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಮನೆಗಳ ಬಳಿ ಸಿಮೆಂಟ್ ತೊಟ್ಟಿಗಳನ್ನಿಟ್ಟು ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕರುಣಾ ಜೀವ ಕಲ್ಯಾಣ ಟ್ರಸ್ಟ್ ಜಯದೇವ ವೃತ್ತ, ಚಿಗಟೇರಿ ಜಿಲ್ಲಾಸ್ಪತ್ರೆ, ರಾಂ ಅಂಡ್ ಕೋ ಸರ್ಕಲ್, ಹಳೇ ಹೆರಿಗೆ ಆಸ್ಪತ್ರೆ ಬಳಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಮಜ್ಜಿಗೆ, ನೀರು ವಿತರಿಸುತ್ತಿದೆ.

ಬಹುತೇಕ ಕಚೇರಿಗಳಲ್ಲಿಲ್ಲ ನೀರು
ದಾವಣಗೆರೆ ಬಹುತೇಕ ಗ್ರಾಮೀಣ ಪ್ರದೇಶಗಳಿಂದ ಸುತ್ತುವರಿದಿದೆ. ಇಲ್ಲಿಗೆ ದಿನಬೆಳಗಾದರೆ ಸಾವಿರಾರು ಜನರು, ಕಾರ್ಮಿಕರು, ನೌಕರರು ಕೆಲಸಕ್ಕೆ ಬರುತ್ತಾರೆ. ಇನ್ನು ಸರ್ಕಾರಿ ಕಚೇರಿ ಕೆಲಸಕ್ಕೆಂದು ಸಹಸ್ರಾರು ಸಾರ್ವಜನಿಕರು ಆಗಮಿಸುತ್ತಾರೆ. ಪಾಲಿಕೆ, ಎಸಿ, ತಹಸೀಲ್ದಾರ್ ಕಚೇರಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಜಿಲ್ಲಾಸ್ಪತ್ರೆ ಸೇರಿ ವಿವಿಧ ಇಲಾಖೆಗಳಿದ್ದು, ಬಹುತೇಕ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಹತ್ತಿರದ ಹೋಟೆಲ್ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.