ಸರಳವಾಗಿ ಗಣಿತ ಬೋಧನೆಗೆ ಸಲಹೆ

ದಾವಣಗೆರೆ: ಎಸೆಸ್ಸೆಲ್ಸಿ ಫಲಿತಾಂಶ ಗಣಿತ ವಿಷಯದ ಮೇಲೆ ನಿಂತಿದ್ದು, ಸರಳ ಬೋಧನೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹೇಳಿದರು.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ರಾಜ್ಯ ವಿಜ್ಞಾನ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ ವಿಜ್ಞಾನ ಕೇಂದ್ರ, ರೋಟರಿ ಕ್ಲಬ್ ಬಿಐಇಟಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣಿತ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಗಣಿತ ಕಬ್ಬಿಣದ ಕಡಲೆ ಎಂಬ ಭಾವನೆ ಮೂಡಿರುತ್ತದೆ. ಗಣಿತ ಕಲಿಕೆ ಸರಳಗೊಳಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಬಿಐಇಟಿ ಪ್ರಾಚಾರ್ಯ ಡಾ.ಎಸ್. ಸುಬ್ರಹ್ಮಣ್ಯಸ್ವಾಮಿ ಮಾತನಾಡಿ, ಕೃಷಿಯಿಂದ ರಾಕೆಟ್ ಉಡಾವಣೆವರೆಗಿನ ತಂತ್ರಜ್ಞಾನ ಗಣಿತಶಾಸ್ತ್ರ ಆಧಾರಿತವಾಗಿದೆ. 0, 1 ಸಂಖ್ಯೆಯನ್ನು ಮಾತ್ರ ಗಣಕ ತಂತ್ರಾಂಶ, ಉಪಕರಣಗಳು ಅರ್ಥೈಯಿಸಿಕೊಳ್ಳಲು ಸಾಧ್ಯ. ಅವುಗಳಿಂದಲೇ ಅಗಾಧ ತಂತ್ರಜ್ಞಾನ ಸೃಷ್ಟಿಯಾಗಿದೆ. ಗಣಿತಶಾಸ್ತ್ರಕ್ಕೆ ಶೂನ್ಯದ ಕೊಡುಗೆ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದರು.

ಕಾಲೇಜಿನ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿ ಬೋಧಿಸಲು ಗಣಿತ ಶಿಕ್ಷಕರು ಚಟುವಟಿಕೆ, ನೂತನ ಕಲಿಕಾ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.

ಸಂಯೋಜಕ ಜೆ. ಪದ್ಮನಾಭ ಮಾತನಾಡಿ, ಪಿಯು ಪ್ರಾಧ್ಯಾಪಕರಿಗೆ ಮಾರ್ಚ್ ತಿಂಗಳಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗಣಿತ ವಿಷಯ ಪರಿವೀಕ್ಷಕ ಎಂ. ಸುರೇಶ್, ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ. ವಸಂತಕುಮಾರಿ, ಪಿಎಸ್‌ಎಸ್‌ಆರ್‌ಎಸ್ ಡೀನ್ ಮಂಜುನಾಥ ರಂಗರಾಜನ್ ಇತರರಿದ್ದರು.