More

  ಸಿಂಥೆಟಿಕ್ ಟ್ರಾೃಕ್‌ಗೆ  8.50 ಕೋಟಿ ಮಂಜೂರು

  ದಾವಣಗೆರೆ : ವರ್ಷವಿಡೀ ಕಚೇರಿಗಳಲ್ಲಿ ಕಡತಗಳ ಮಧ್ಯ ಕುಳಿತು ಕೆಲಸ ನಿರ್ವಹಿಸುತ್ತಿದ್ದ ಸರ್ಕಾರಿ ನೌಕರರು ಮಂಗಳವಾರ ಬಾನಾಡಿಗಳಂತೆ ಹೊರಬಂದು ಆಟೋಟಗಳಲ್ಲಿ ಭಾಗವಹಿಸಿ ನಲಿದಾಡಿದರು. ಹಾಡು ಹಕ್ಕಿಗಳಂತೆ ಮಧುರ ಗೀತೆಗಳನ್ನು ಹಾಡಿ ಸಂಭ್ರಮಿಸಿದರು.
   ಹೌದು..! ಪ್ರತಿದಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಉತ್ಸಾಹ ಹಾಗೂ ಮನೋಲ್ಲಾಸ ಮೂಡಿಸಲು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಬ್ಬವೇ ನಡೆಯಿತು.
   ಜಿಲ್ಲಾಡಳಿತ ಹಾಗೂ ಜಿಪಂ ಇತರೆ ಇಲಾಖೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ನೌಕರರು ಬೆಳಗ್ಗೆಯಿಂದಲೇ ಅತ್ಯುತ್ಸಾಹದಿಂದ ಆಗಮಿಸಿದರು. ಸ್ನೇಹಿತರೊಂದಿಗೆ ಕುಶಲೋಪರಿ ಹಂಚಿಕೊಂಡು ಹಾಗೂ ಸೆಲ್ಫಿ  ಕ್ಲಿಕ್ಕಿಸಿಕೊಂಡರು.
   ಕ್ರೀಡಾಕೂಟದ ಉದ್ಘಾಟನೆಯ ನಂತರ ಆರಂಭಗೊಂಡ ಅಥ್ಲೆಟಿಕ್ಸ್, ಕಬ್ಬಡಿ, ಖೋ-ಖೋ, ವಾಲಿಬಾಲ್ ಯೋಗ, ಥ್ರೋಬಾಲ್ ಮೊದಲಾದ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರಲ್ಲದೆ, ಕುವೆಂಪು ಕನ್ನಡ ಭವನದಲ್ಲಿ ಸುಶ್ರಾವ್ಯ ಜಾನಪದ ಗೀತೆಗಳನ್ನು ಹಾಡಿದರು. ನೌಕರರಿಗೆ ಬಿಸಿಲಿನ ಬೇಗೆ ತಣಿಸಲು ಬೆಳಗ್ಗೆ ಬೆಲ್ಲದ ಪಾನಕ ಹಾಗೂ ಮಧ್ಯಾಹ್ನ ಸಿರಿಧಾನ್ಯ ಭೋಜನ ಏರ್ಪಡಿಸಲಾಗಿತ್ತು.
   ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕೆ 8.50 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಹೇಳಿದರು.
   ಈಗಾಗಲೇ ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಬರುವುದರೊಳಗೆ ಶಂಕುಸ್ಥಾಪನೆ ನೆರವೇರಿಸಿ ಚುನಾವಣೆಯ ನಂತರ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
   ಪ್ರಧಾನಿ ನರೇಂದ್ರ ಮೋದಿ ಖೇಲೊ ಇಂಡಿಯಾ ಯೋಜನೆ ಮೂಲಕ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಿ ಸಾಕಷ್ಟು ಹಣ ಒದಗಿಸಿದ್ದಾರೆ. ಇದರಿಂದ ಬಹಳಷ್ಟು ಜನ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಬೆಳ್ಳಿ ಮತ್ತು ಬಂಗಾರದ ಪದಕ ಪಡೆಯುತ್ತಿದ್ದಾರೆ ಎಂದರು.
   ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಸರ್ಕಾರಿ ನೌಕರರು ಏಕತಾನತೆಯಿಂದ ಕೆಲಸ ನಿರ್ವಹಿಸುತ್ತಾರೆ. ಆದರೆ, ಇದರಿಂದಲೇ ಕ್ರಿಯಾಶೀಲತೆ, ದಕ್ಷತೆ ಹಾಗೂ ವಿಶೇಷ ಆಲೋಚನೆ ವೃದ್ಧಿಸುವುದಿಲ್ಲ. ಒಬ್ಬ ವ್ಯಕ್ತಿಯ ಪರಿಪೂರ್ಣ ಅಭಿವೃದ್ಧಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಅವಶ್ಯಕ ಎಂದು ತಿಳಿಸಿದರು.
   ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ನೌಕರರು ಒತ್ತಡಗಳ ನಡುವೆ ಕೆಲಸ ನಿರ್ವಹಿಸುತ್ತಿದ್ದು, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ರಚನಾತ್ಮಕ ಬೆಳವಣಿಗೆ ಆಗಲಿದೆ. ಸಂಬಂಧಗಳು ಗಟ್ಟಿಗೊಳ್ಳಲಿವೆ. ಮನಸ್ಸಿಗೆ ಉಲ್ಲಾಸ ದೊರೆಯುವ ಜತೆಗೆ ಪ್ರತಿದಿನ ಪರಿಣಾಮಕಾರಿ ಕೆಲಸ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
   ಬರುವ ಜೂನ್ ಅಥವಾ ಜುಲೈನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಗಿದೆ. ದಾವಣಗೆರೆ ಜಿಲ್ಲೆಯವರು ವಿನ್ನರ್ ಆಗಬೇಕು. ಹೊಸದಾಗಿ ಯೋಗ ಮತ್ತು ಖೋ-ಖೋ ಕ್ರೀಡೆ ಸಹ ಸೇರಿಸಲಾಗಿದೆ ಎಂದು ತಿಳಿಸಿದರು.
   ಜಿಪಂ ಸಿಇಒ ಸುರೇಶ್ ಇಟ್ನಾಳ್ ಧ್ವಜಾರೋಹಣ ನೆರವೇರಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಆರ್. ಜಯಲಕ್ಷ್ಮಿಬಾಯಿ, ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಬಿ. ಫಾಲಾಕ್ಷಿ, ಕಾರ್ಯದರ್ಶಿ ಸಿ. ಗುರುಮೂರ್ತಿ, ಖಜಾಂಚಿ ಬಿ.ಆರ್. ತಿಪ್ಪೇಸ್ವಾಮಿ, ಗೌರವಾಧ್ಯಕ್ಷರಾದ ಎಚ್. ಬಸವರಾಜ, ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ಪರಶುರಾಮಪ್ಪ, ಆಕಾಶಿತ ಬಿಲ್ಡರ್ಸ್‌ ಮಾಲೀಕ ಡಾ.ಎಸ್. ರಂಗನಾಥ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಇತರರು ಇದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ ಸ್ವಾಗತಿಸಿದರು.
   ಕೋಟ್..
   ಫೆ.27ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ, ಒಪಿಎಸ್, 7ನೇ ವೇತನ ಆಯೋಗದ ಬೇಡಿಕೆ ಈಡೇರಿಸುವ ಭರವಸೆಯಿದೆ. ನೌಕರರು ತಮ್ಮ ಭವಿಷ್ಯದ ದೃಷ್ಠಿಯಿಂದ ಸಮ್ಮೇಳನದಲ್ಲಿ ಭಾಗವಹಿಸಬೇಕು.
    ಸಿ.ಎಸ್. ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts