ಸೇವಾ ಭದ್ರತೆ, ಕಾಯಂಗೆ ಆಗ್ರಹಿಸಿ ಧರಣಿ ನಾಳೆ

ದಾವಣಗೆರೆ: ಸೇವಾ ಭದ್ರತೆ ನೀಡಿ ಕಾಯಂಗೊಳಿಸುವಂತೆ ಆಗ್ರಹಿಸಿ ಸೆ.27ರಂದು ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಂಡಿದ್ದಾರೆ.

ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಜಿಲ್ಲೆಯಲ್ಲೂ ಧರಣಿ ನಡೆಯಲಿದೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಕೊಟ್ರೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ 11 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅನೇಕ ವರ್ಷದಿಂದ 513 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ತಿಂಗಳಿಗೆ 11ರಿಂದ 13 ಸಾವಿರ ರೂ. ವೇತನ, ಆರರಿಂದ ಎಂಟು ತಿಂಗಳಿಗೊಮ್ಮೆ ಬರುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.

ಹಿಂದಿನ ಸರ್ಕಾರ ಒಬಿಸಿ ಉಪನ್ಯಾಸಕರು, ಮುರಾರ್ಜಿ ದೇಸಾಯಿ ಶಿಕ್ಷಕರು, ಹೊರಗುತ್ತಿಗೆ ಅತಿಥಿ ಉಪನ್ಯಾಸಕರು, ದಿನಗೂಲಿ ನೌಕರರು, ಪೌರಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಿದೆ. ಆದರೆ, ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಮೀನಮೇಷ ನಡೆಸುತ್ತಿದೆ. ಅನೇಕ ಹೋರಾಟ ನಡೆದರೂ ಪ್ರಯೋಜನವಾಗಿಲ್ಲ ಎಂದರು.

2016-17ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿ 2017ರಲ್ಲಿ ಸೇವೆಯಿಂದ ಹೊರಗುಳಿದವರು ಹಾಗೂ 2018-19ನೇ ಸಾಲಿಗೆ ಕರ್ತವ್ಯನಿರತ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು. ಏಳನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ವಿವಿಧ ರಾಜ್ಯದಲ್ಲಿ ನೀಡುತ್ತಿರುವ ವೇತನ ತಃಖ್ತೆಯೊಂದಿಗೆ ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಪ್ರಸಕ್ತ ಸಾಲಿನಿಂದಲೇ 30 ಸಾವಿರ ರೂ. ವೇತನ ಜಾರಿಯಾಗಬೇಕು ಎಂದರು.

ಅತಿಥಿ ಉಪನ್ಯಾಸಕರಿಗೆ ಶಾಶ್ವತ ನಿಯಮಾವಳಿ ರೂಪಿಸಿ ದೆಹಲಿ, ಹರಿಯಾಣ, ತ್ರಿಪುರ ಮೊದಲಾದ ರಾಜ್ಯ ಸರ್ಕಾರಗಳ ಮಾದರಿಯಲ್ಲೇ ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು. ಅತಿಥಿ ಉಪನ್ಯಾಸಕರು ಎಂಬ ಆಧುನಿಕ ಜೀತ ಪದ್ಧತಿ ಕೈಬಿಡಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಡಾ. ದೇವೇಂದ್ರಪ್ಪ, ಡಾ.ಎಂ. ಪ್ರಭಾಕರ, ಎಂ.ಆರ್. ರಾಘವೇಂದ್ರ, ವಿ. ಹುಲಿಕುಂಟೇಶ್ವರ, ಡಿ.ಪಿ. ಗಂಗಾಧರ, ಕೆ. ಚಂದ್ರಶೇಖರ್, ಮಲ್ಲಿಕಾರ್ಜುನ್ ಇದ್ದರು.