More

    ಮುಗಿಯಿತು ಬೇಸಿಗೆ ರಜೆ, ತೆರೆಯಿತು ಶಾಲೆಯ ಬಾಗಿಲು

    ದಾವಣಗೆರೆ: ಬೇಸಿಗೆ ರಜೆಯ ನಂತರ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಜಿಲ್ಲೆಯ ಶಾಲೆಗಳ ಬಾಗಿಲು ತೆರೆದಿದ್ದು ಮಕ್ಕಳ ಕಲರವ ಮತ್ತೆ ಕೇಳಿಬರುತ್ತಿದೆ. ಎರಡು ದಿನಗಳಿಂದ ಶಾಲೆಗಳ ಆವರಣವನ್ನು ಸ್ವಚ್ಛ ಗೊಳಿಸಿಕೊಳ್ಳಲಾಗಿದ್ದು ಬುಧವಾರ ಪ್ರಾರಂಭೋತ್ಸವ ನೆರವೇರಿಸಲಾಯಿತು.
     ಮಕ್ಕಳ ಸ್ವಾಗತಕ್ಕಾಗಿ ಶಾಲಾ ಆವರಣದಲ್ಲಿ ಬಾಳೆ ಕಂದು, ತೋರಣಗಳನ್ನು ಕಟ್ಟಲಾಗಿತ್ತು. ಕೆಲವು ಖಾಸಗಿ ಶಾಲೆಯವರು ಬಲೂನುಗಳಿಂದ ಅಲಂಕಾರ ಮಾಡಿದ್ದರು. ಮೊದಲ ದಿನ ಒಂದೊಂದು ಕಡೆ ಒಂದೊಂದು ರೀತಿಯ ಸಂಭ್ರಮ ಎದ್ದು ಕಂಡಿತು.
     ನಗರದ ನಿಟ್ಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣವಂತೂ ಕಳೆಗಟ್ಟಿತ್ತು. ಮಕ್ಕಳಿಗೆ ಗುಲಾಬಿ ಹೂವು ಕೈಗಿಟ್ಟು ಮೈಸೂರು ಪಾಕ್ ತಿನ್ನಿಸಿ ಸ್ವಾಗತಿಸಲಾಯಿತು. ಶಾರದಾ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿಸಿ ಸಾಂಕೇತಿಕವಾಗಿ ಅಕ್ಕಿಯ ಮೇಲೆ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳನ್ನು ನೀಡಲಾಯಿತು.
     ಶಿಸ್ತುಬದ್ಧವಾಗಿ, ಸಾಲಾಗಿ ನಿಂತಿದ್ದ ಮಕ್ಕಳು ಪ್ರಾರ್ಥನೆ ಮಾಡಿದರು, ನಾಡಗೀತೆ, ರಾಷ್ಟ್ರಗೀತೆಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸಿದರು. ಮಹಾನಗರ ಪಾಲಿಕೆ ಸದಸ್ಯೆ ಸವಿತಾ, ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ. ದಾರುಕೇಶ್ವರ, ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಕೆ.ಬಿ. ಪರಮೇಶ್ವರಪ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ಕೆ. ಚಂದ್ರಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ. ಸುರೇಶ್, ಶಿಕ್ಷಕ ಜಯಣ್ಣ, ಎಸ್‌ಡಿಎಂಸಿ ಸದಸ್ಯ ಪ್ರಸನ್ನಕುಮಾರ್ ಇದ್ದರು.
     ಪ್ರಾರಂಭೋತ್ಸವ ಆಗಿದ್ದರಿಂದ ಬಿಸಿಯೂಟವೂ ವಿಶೇಷವಾಗಿತ್ತು. ಗೋಧಿ ಪಾಯಸದ ಸವಿಯೊಂದಿಗೆ ಮಕ್ಕಳು ಅನ್ನ, ಸಾಂಬಾರ್ ಊಟ ಮಾಡಿದರು. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಅಕ್ಕಿ ಪಾಯಸ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
     …
     (ಕೋಟ್)
     ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿದ್ದು ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಕ್ಕಳ ಹಾಜರಾತಿಯು ನಾಲ್ಕೈದು ದಿನಗಳಲ್ಲಿ ಸುಧಾರಣೆ ಕಾಣಬಹುದು. ಕೆಲವು ಗ್ರಾಮಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು ಜಾಥಾ ನಡೆಸಲಾಗಿದೆ. ಸಿಹಿ ಅಡುಗೆ ತಯಾರಿಸಿ ಬಿಸಿಯೂಟ ನೀಡಲಾಗಿದೆ. ಶಿಕ್ಷಕರು ಮತ್ತಿತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು.
      ಜಿ.ಆರ್. ತಿಪ್ಪೇಶಪ್ಪ, ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts