More

    ಶಾಲೆಗಳ ಆವರಣದಲ್ಲಿ ಅರಳಲಿದೆ ಸಸ್ಯೋದ್ಯಾನ

    ರಮೇಶ ಜಹಗೀರದಾರ್ ದಾವಣಗೆರೆ
     ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಪೂರಕವಾಗಿ ತಾಲೂಕಿಗೆ ಒಂದರಂತೆ ಪ್ರೌಢಶಾಲೆಗಳ ಆವರಣದಲ್ಲಿ ಸಸ್ಯೋದ್ಯಾನ (ಆರ್ಬೊರೇಟಂ) ಅಭಿವೃದ್ಧಿಪಡಿಸಲು ಯೋಜನೆ ಸಿದ್ಧವಾಗುತ್ತಿದೆ.
     ಒಂದೇ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವುದು ಈ ಸಸ್ಯೋದ್ಯಾನದ ಪರಿಕಲ್ಪನೆಯಾಗಿದೆ. ಮೂರು ಎಕರೆ ಜಾಗವಿರುವ ಪ್ರೌಢಶಾಲೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
     ಸಸ್ಯಲೋಕದ ಬಗ್ಗೆ ಮಕ್ಕಳಿಗೆ ವೈಜ್ಞಾನಿಕ ಅರಿವು ಮೂಡಿಸುವುದು ಇದರ ಒಟ್ಟಾರೆ ಆಶಯವಾಗಿದೆ. ಸಸ್ಯದ ಬೇರು, ತೊಗಟೆ, ಎಲೆ, ಹೂವು, ಔಷಧೀಯ ಗುಣಗಳು, ಅದರ ಮೌಲ್ಯ ಹೀಗೆ ಸಮಗ್ರ ಪರಿಚಯ ಮಾಡಿಕೊಡುವ ಪ್ರಯತ್ನವಿದು.
     ಶಿಕ್ಷಣ ಮತ್ತು ಅರಣ್ಯ ಇಲಾಖೆಯ ಸಮನ್ವಯದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ 25-30 ಜಾತಿಯ ಸಸ್ಯಗಳ ಜತೆಗೆ ಚಿತ್ರದುರ್ಗ, ಹಾವೇರಿ, ಚಿಕ್ಕಮಗಳೂರು ಇನ್ನಿತರ ಜಿಲ್ಲೆಗಳಿಂದಲೂ ತರಿಸಿ 50 ರಿಂದ 60 ಪ್ರಭೇದದ ಸಸ್ಯಗಳನ್ನು ನೆಡುವ ಆಲೋಚನೆ ನಡೆದಿದೆ. ಅವುಗಳಲ್ಲಿ ಔಷಧೀಯ ಸಸ್ಯಗಳೂ ಇರಲಿವೆ. ನಮ್ಮ ಜಿಲ್ಲೆಯ ಹವಾಮಾನಕ್ಕೆ ಹೊಂದಿಕೊಳ್ಳುವ ಗಿಡಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
     ಇದಕ್ಕಾಗಿ ಅಧಿಕಾರಿಗಳು ಕ್ರಿಯಾಯೋಜನೆ ಸಿದ್ಧಪಡಿಸುತ್ತಿದ್ದಾರೆ. ಶಾಲೆಗಳನ್ನು ಗುರುತಿಸುವ ಕೆಲಸ ಶಿಕ್ಷಣ ಇಲಾಖೆ ಮಾಡಿದರೆ, ಅಲ್ಲಿ ಯಾವ ಜಾತಿಯ ಗಿಡಗಳನ್ನು ಎಷ್ಟು ಸಂಖ್ಯೆಯಲ್ಲಿ ನೆಡಬೇಕು ಎನ್ನುವುದನ್ನು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಬೇಕಿದೆ.
     ವಿಶಾಲವಾದ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿರುವ ಬೊಟಾನಿಕಲ್ ಗಾರ್ಡನ್‌ಗಳು ದೇಶದ ವಿವಿಧೆಡೆಗಳಲ್ಲಿವೆ. ಆದರೆ ಶಾಲೆಯೊಂದರ ವಿದ್ಯಾರ್ಥಿಗಳಿಗೆ ಸೀಮಿತವಾದ ಮಿನಿ ಸಸ್ಯೋದ್ಯಾನ ನಿರ್ಮಿಸಲು ಹೊರಟಿರುವುದು ನೂತನ ಪರಿಕಲ್ಪನೆಯಾಗಿದೆ.
     ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾಹಿತಿ ನೀಡಲು, ಅವರ ಜ್ಞಾನಾರ್ಜನೆಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥಿತವಾಗಿ ಸಸ್ಯೋದ್ಯಾನವನ್ನು ಅಭಿವೃದ್ಧಿಪಡಿಸಲು ಸಿದ್ಧತೆಗಳು ನಡೆದಿವೆ. ಪ್ರತಿಯೊಂದು ಸಸ್ಯದ ಬಳಿ ಫಲಕವೊಂದನ್ನು ಅಳವಡಿಸಲಾಗುವುದು. ಅದರಲ್ಲಿ ಯಾವ ಜಾತಿಯ ಗಿಡ, ಪ್ರಭೇದ ಯಾವುದು, ಅದರ ಸಾಮಾನ್ಯ ಹೆಸರು, ವೈಜ್ಞಾನಿಕವಾಗಿ ಏನೆಂದು ಕರೆಯಲಾಗುತ್ತದೆ. ಅವುಗಳ ಉಪಯೋಗವೇನು ಎಂಬುದನ್ನು ನಮೂದಿಸಲಾಗುತ್ತದೆ. ಇದರಿಂದ ಸಸ್ಯಗಳ ಬಗ್ಗೆ ಮಕ್ಕಳಿಗೆ ಸ್ಪಷ್ಟ ತಿಳಿವಳಿಕೆ ಬರಲಿದೆ.
     …
     (ಕೋಟ್)
     ಸಸ್ಯೋದ್ಯಾನಗಳ ಅಭಿವೃದ್ಧಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಇದರಿಂದ ಸಹಾಯವಾಗಲಿದೆ. ಈ ಉದ್ಯಾನಗಳ ನಿರ್ವಹಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೇ ನೀಡುವ ಉದ್ದೇಶವಿದೆ. ಆಗ ಅವರು ಹೆಚ್ಚು ಆಸಕ್ತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಾರೆ.
      ಸುರೇಶ ಬಿ. ಇಟ್ನಾಳ್, ಜಿ.ಪಂ. ಸಿಇಒ ದಾವಣಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts