ದಾವಣಗೆರೆ : ಆಪರೇಷನ್ ಸಿಂಧೂರ ಬಗ್ಗೆ ಕಾಂಗ್ರೆಸ್‌ನ ಕೆಲವು ನಾಯಕರು, ಸಚಿವರು ಅಪಸ್ವರ ಎತ್ತಿದ್ದು, ಅವರಲ್ಲೇ ದ್ವಂದ್ವ ಕಾಣುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದು, ಕಾರ್ಯತಂತ್ರ ರೂಪಿಸಲು ಸೂಚಿಸಿದ್ದಾರೆ. ರಾಜತಾಂತ್ರಿಕವಾಗಿ ಪಾಕ್ ಜತೆಗಿನ ಎಲ್ಲ ಸಂಬಂಧವನ್ನೂ ಕಡಿತಗೊಳಿಸಿ, ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಭಯೋತ್ಪಾದಕರ ರಾಷ್ಟ್ರ ಎಂಬುದನ್ನು ಸಾರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಉಗ್ರರ ದಾಳಿ ಬಳಿಕ ಪ್ರಧಾನಿ ಮೋದಿ ಅವರು ಹೇಳಿಕೆ ಕೊಟ್ಟು ಸುಮ್ಮನಾಗಿಲ್ಲ. ಭಾರತೀಯ ಸೇನೆ ಮೂಲಕ ಭಯೋತ್ಪಾದಕರ 9 ನೆಲೆಗಳನ್ನು ಧ್ವಂಸ ಮಾಡಿದ್ದಾರೆ. 14ಕ್ಕೂ ಹೆಚ್ಚು ವಾಯುನೆಲೆಗಳಿಗೆ ಹಾನಿ ಮಾಡಿದ್ದಾರೆ ಎಂದು ತಿಳಿಸಿದರು.
