ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನ

ದಾವಣಗೆರೆ :  ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬದುಕು ಬಂಗಾರ. ಮರೆತು ಮಲಗಿದರೆ ಜೀವನ ಬಂಧನಕಾರಿ. ಅರಿವಿನ ಆದರ್ಶಗಳು ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗೆ ಸೋಪಾನ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶ್ರೀಗಳು ನುಡಿದರು.  ನಗರದ ಅಭಿನವ ರೇಣುಕ ಮಂದಿರದಲ್ಲಿ ಶನಿವಾರ, ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಆಷಾಢ ಮಾಸದ ಜನಜಾಗೃತಿ ಧರ್ಮ ಸಮಾವೇಶದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಕೂಡಾ ಎತ್ತರಕ್ಕೇರಬೇಕು. ಮನುಷ್ಯನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಜೀವನದ ಉಜ್ವಲ ಭವಿಷ್ಯಕ್ಕೆ ಮಹಾತ್ಮರ ಸಂದೇಶಗಳೂ ಅಷ್ಟೇ ಪ್ರಮುಖವಾಗಿದೆ ಎಂದು ತಿಳಿಸಿದರು.  ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವ ಗುಣ. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗಲಾರದು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು, ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು, ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬಾಳಬೇಕು ಎಂದು ಹೇಳಿದರು.  ಸ್ವಾರ್ಥರಹಿತ ಬದುಕಿಗೆ ಬೆಲೆಯಿದೆ. ಸಿದ್ಧಾಂತ ರಹಿತ ಜೀವನ ದಿಕ್ಸೂಚಿ ಇಲ್ಲದ ನೌಕೆಯಂತೆ. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ, ಮೌಲ್ಯಗಳನ್ನು ಬಲಿ ಕೊಡಬಾರದು. ಧರ್ಮದಿಂದ ವಿಮುಖನಾದರೆ ಬದುಕು ಅಶಾಂತಿಯ ಕಡಲಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಷ್ಠಿ ಪ್ರಜ್ಞೆಯಿಂದ ಜೀವ ಜಗತ್ತಿಗೆ ಕೊಟ್ಟ ಮೌಲ್ಯಾಧಾರಿತ ಚಿಂತನೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.  ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ. ಜ್ಞಾನ, ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.  ಬೀರೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತದಲ್ಲಿ, ಸಮಾಜದಲ್ಲಿ ಸಂಘಟನೆಗಳು ಇರಬೇಕಲ್ಲದೇ ಸಂಘರ್ಷಗಳು ಇರಬಾರದು. ಸತ್ಯ, ಶಾಂತಿ ಸಮಾಜದ ಎರಡು ಕಣ್ಣು ಎಂದು ತಿಳಿಸಿದರು. ಚನ್ನಗಿರಿ ಡಾ.ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಉಪಸ್ಥಿತರಿದ್ದರು.  ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್ ಮಾತನಾಡಿ, ವೀರಶೈವ ಸಮಾಜದ ಸಾವಿರಾರು ಜನರು ಮತಾಂತರಕ್ಕೆ ಒಳಗಾಗುತ್ತ ಬಂದಿದ್ದಾರೆ. ಈ ಪಿಡುಗನ್ನು ತಡೆಗಟ್ಟಲು ಕ್ರಿಯಾಯೋಜನೆ ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.  ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷ್ ಚಂದ್ರ ಮಾತನಾಡಿ, ಇಂದಿನ ರಾಜಕಾರಣ ದಾರಿ ತಪ್ಪಿದೆ. ಹಣವಿಲ್ಲದೇ ಚುನಾವಣೆ ಮಾಡಲು ಸಾಧ್ಯವಿಲ್ಲ. ಆ ರೀತಿ ಆಯ್ಕೆಯಾಗಿ ಬಂದ ವ್ಯಕ್ತಿಯಿಂದ ಪ್ರಾಮಾಣಿಕ ಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜಕಾರಣಿಗಳು ತಪ್ಪು ಮಾಡಿದಾಗ ಗುರುಗಳು ಅವರಿಗೆ ಬುದ್ಧಿ ಹೇಳಬೇಕು ಎಂದು ಮನವಿ ಮಾಡಿದರು.  ರಾಜ್ಯ ಬಿಜೆಪಿ ಎಸ್.ಟಿ. ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ‘ಸಮಾಜ ಸೇವಾ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾಲಿಕೆ ಪ್ರತಿಪಕ್ಷ ನಾಯಕ ಪ್ರಸನ್ನ ಕುಮಾರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿದರು.  ಎಸ್‌ಜೆವಿಪಿ ಕಾಲೇಜು ಕಾರ್ಯದರ್ಶಿ ಆರ್.ಟಿ. ಪ್ರಶಾಂತ, ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ  ದೇವರಮನೆ ಶಿವಕುಮಾರ್, ದೇವರಮನೆ ಶಿವರಾಜ್ ಇದ್ದರು. ಬಾದಾಮಿ ಮಲ್ಲಿಕಾರ್ಜುನ ಸ್ವಾಗತಿಸಿದರು. ಡಾ.ವೀರಣ್ಣ ಶೆಟ್ಟರ್ ನಿರೂಪಿಸಿದರು. ಗುರು ರೇಣುಕ ಸಾಂಸ್ಕೃತಿಕ ಸಂಘದ ಕೊಟ್ರೇಶ್ ಜಗದ್ಗುರುಗಳಿಗೆ ಗೌರವ ಮಾಲೆ ಸಮರ್ಪಿಸಿದರು.  ಬೆಳಗ್ಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ನಡೆಯಿತು.
 …  
(ಕೋಟ್)  
ವೀರಶೈವ ಮಠಗಳು ಸ್ವಾತಂತ್ರೃ ಪೂರ್ವದಿಂದಲೂ ನಾಡಿಗೆ ತ್ರಿವಿಧ ದಾಸೋಹಗಳನ್ನು ಮಾಡುತ್ತ ಬಂದಿವೆ. ಸಮಾಜವನ್ನು ಸರಿ ದಾರಿಗೆ ತೆಗೆದುಕೊಂಡು ಹೋಗುತ್ತಿವೆ. ಮೂಢ ನಂಬಿಕೆಗಳನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರಿವೆ.  

ಜಯದೇವ ನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ  …      

Share This Article

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

30 ದಿನಗಳಲ್ಲೇ ಸ್ಲಿಮ್ ಆ್ಯಂಡ್​ ಫಿಟ್​ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…