ದಾವಣಗೆರೆ ಜಿಲ್ಲೆಗೆ ಕಳೆ ತಂದ ರೋಹಿಣಿ ಮಳೆ

ದಾವಣಗೆರೆ: ಜಿಲ್ಲೆಯಲ್ಲಿ ಕಾಣೆಯಾಗಿದ್ದ ಮಳೆರಾಯ ಕೊನೆಗೂ ದರ್ಶನ ನೀಡಿದ್ದಾನೆ. ಮಂಗಳವಾರ ಸಂಜೆ ಅರ್ಧ ತಾಸಿಗೂ ಹೆಚ್ಚು ಕಾಲ ಗಾಳಿ ಸಹಿತ ಮಳೆ ಸುರಿದಿದೆ. ಬಿಸಿಲ ಧಗೆಯಿಂದ ಬಸವಳಿದಿದ್ದ ಜನರಲ್ಲಿ ಹರ್ಷ ಮೂಡಿಸಿದೆ.

ರೋಹಿಣಿ ಮಳೆಯಾದ್ರೆ ಓಣಿಯಲ್ಲೆಲ್ಲ ಬೆಳೆ ಎಂಬ ಗಾದೆ ಮಾತಿದೆ. ರೋಹಿಣಿ ಮಳೆ ಸಿಂಚನದಿಂದ ಜಿಲ್ಲೆಯ ವಿವಿಧೆಡೆ ತಂಪಾದ ವಾತಾವರಣ ಕಂಡುಬಂತು. ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳಲು ರೈತರಿಗೆ ಮಳೆ ವರದಾನವಾಗಿದೆ.

ಜಗಳೂರು ತಾಲೂಕಿನ ಅಣಬೂರು, ಕ್ಯಾಸೇನಹಳ್ಳಿ, ಗೌಡಗೊಂಡನಹಳ್ಳಿ, ಹೊಸಕೆರೆ ಸೇರಿ ಕೆಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ತಾಲೂಕಿನ ಗೋಶಾಲೆಯಲ್ಲಿ ಸಂಗ್ರಹಿಸಿದ್ದ ಮೇವು ಮಳೆಯಲ್ಲಿ ತೊಯ್ದಿದೆ. ನಂತರ ಅಲ್ಲಿಗೆ ತಾಡಪಾಲು ವ್ಯವಸ್ಥೆ ಮಾಡಲಾಗಿದೆ.

ದಾವಣಗೆರೆ ತಾಲೂಕಿನ ಕುರುಡಿ, ಕಿತ್ತೂರು ಮತ್ತಿತರೆ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ದಾವಣಗೆರೆ ನಗರದಲ್ಲೂ ಅರ್ಧ ತಾಸು ಬಿರುಸಾದ ಮಳೆಯಾಗಿ ರಸ್ತೆ, ಚರಂಡಿಗಳಲ್ಲಿ ನೀರು ಹರಿಯಿತು. ಸಾರ್ವಜನಿಕರು, ವಿದ್ಯಾರ್ಥಿನಿಯರು ಛತ್ರಿ ಹಿಡಿದು ಮನೆಯತ್ತ ಹೆಜ್ಜೆ ಹಾಕಿದರು. ಪಿ.ಜೆ.ಬಡಾವಣೆಯಲ್ಲಿ ಕೆಲ ಯುವತಿಯರು ರಸ್ತೆಗಿಳಿದು ಮಳೆಯಲ್ಲೇ ನೃತ್ಯ ಮಾಡಿ ಸಂಭ್ರಮಿಸಿದರು.

ಹರಿಹರ ತಾಲೂಕಿನಲ್ಲಿ ಅರ್ಧ ತಾಸು ಗಾಳಿ-ಧೂಳು ಸಹಿತ ತುಂತುರು ಮಳೆಯಾಗಿದೆ. ಮಲೇಬೆನ್ನೂರು ಹೋಬಳಿಯ ಮಲೇಬೆನ್ನೂರು, ಕೊಮಾರನಹಳ್ಳಿ, ದಿಬ್ಬದಹಳ್ಳಿ, ಹಾಲಿವಾಣ, ಹರಳಹಳ್ಳಿ, ಯರಲಬನ್ನಿಕೋಡು ಮುಂತಾದೆಡೆ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಗೋಲಿ ಗಾತ್ರದ ಆಲಿಕಲ್ಲಿನ ಹೊಡೆತಕ್ಕೆ ಹರಳಹಳ್ಳಿ, ಯರಲಬನ್ನಿಕೋಡು ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಪೈರು ನೆಲದ ಪಾಲಾಗಿದೆ.

ಚನ್ನಗಿರಿ ತಾಲೂಕಿನಲ್ಲೂ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ತುಂತುರು ಮಳೆಯಾಗಿದೆ. ಯರಗಟ್ಟಿಹಳ್ಳಿ ಮತ್ತಿತರೆಡೆ ಆಲಿಕಲ್ಲು ಮಳೆ ಸುರಿದಿದೆ. ಹರಪನಹಳ್ಳಿ ತಾಲೂಕಿನಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ನಂದಿಬೇವೂರು, ಬಾಗಳಿ, ನಂದಿಬೇವೂರು ತಾಂಡಾದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಕೆಲವೆಡೆ ಮರಗಳು ಉರುಳಿವೆ.

Leave a Reply

Your email address will not be published. Required fields are marked *