ದಾವಣಗೆರೆ : ಜಿಲ್ಲಾದ್ಯಂತ ಮಂಗಳವಾರ ಮುಂಗಾರುಪೂರ್ವ ಮಳೆ ಆರ್ಭಟಿಸಿತು. ಸಿಡಿಲು, ಗುಡುಗು, ಮಿಂಚು ಅಬ್ಬರಿಸಿದವು. ಮಳೆಯ ಹೊಡೆತಕ್ಕೆ ಅಲ್ಲಲ್ಲಿ ಬೆಳೆಗಳಿಗೆ ಹಾನಿಯಾಗಿದ್ದು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು. ಇಲ್ಲಿನ ವಿನೋಬ ನಗರದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಸಂಜೆ 6 ಕ್ಕೆ ಆರಂಭವಾದ ಮಳೆ ಎರಡು ಗಂಟೆಗೂ ಹೆಚ್ಚು ಕಾಲ ಎಡೆಬಿಡದೇ ಸುರಿಯಿತು. ಮಳೆಯ ರಭಸಕ್ಕೆ ನಗರದ ಪಿಬಿ ರಸ್ತೆ, ಹದಡಿ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆಗಳ ಮೇಲೆಲ್ಲ ನೀರು ಹರಿಯಿತು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಮಹಾನಗರ ಪಾಲಿಕೆ ಮುಂಭಾಗ, ಈರುಳ್ಳಿ ಮಾರ್ಕೆಟ್ ರೈಲ್ವೆ ಕೆಳಸೇತುವೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಪಾದಚಾರಿಗಳು ಕೊಡೆಗಳನ್ನು ಹಿಡಿದು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಹಣ್ಣು, ತರಕಾರಿ ತಿಂಡಿ ಇನ್ನಿತರ ಪದಾರ್ಥಗಳನ್ನು ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಸ್ಥರು ತೊಯ್ದು ತೊಪ್ಪೆಯಾದರು. ಮುಂಬರುವ ಮುಂಗಾರು ಹಂಗಾಮಿಗೆ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರಿಗೆ ಈ ಮಳೆಯಿಂದ ಅನುಕೂಲವಾಗಲಿದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಈ ಮಳೆ ತಂಪೆರೆಯಿತು.
