More

  ರೈಲ್ವೆ ಸೇತುವೆ ನಿರ್ಮಾಣಕ್ಕೆ 49.26 ಕೋಟಿ ರೂ. ಮಂಜೂರು

  ದಾವಣಗೆರೆ : ನಗರದ ಅಶೋಕ ಟಾಕೀಸ್ ಹತ್ತಿರ  ರೈಲ್ವೆ ಸೇತುವೆ ನಿರ್ಮಾಣಕ್ಕೆ 49.26 ಕೋಟಿ ರೂ. ಮಂಜೂರಾಗಿದೆ ಎಂದು ಸಂಸದ ಡಾ.ಜಿ.ಎಂ. ಸಿದ್ದೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   ರೈಲ್ವೆ ಸಚಿವಾಲಯದ ಹಣ ಮಂಜೂರಾತಿಯಿಂದ ನಗರದಲ್ಲಿ ಜ್ವಲಂತ ಸಮಸ್ಯೆಯಾಗಿದ್ದ ಅಶೋಕ ಟಾಕೀಸ್ ಹತ್ತಿರದ ರೈಲ್ವೆ ಗೇಟ್ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ದೊರೆತಂತಾಗಿದೆ ಎಂದು ಹೇಳಿದ್ದಾರೆ.
   ಈಗಾಗಲೇ ಅಶೋಕ ಟಾಕೀಸ್ ಹತ್ತಿರದ ರೈಲ್ವೆ ಗೇಟ್ ನಂ.199ಕ್ಕೆ ಲಘು ವಾಹನಗಳ ಸಂಚಾರಕ್ಕೆ ಕೆಳಸೇತುವೆ ನಿರ್ಮಾಣ ಮಾಡಲಾಗಿದ್ದು, ಬಾರಿ ವಾಹನಗಳ ಸಂಚಾರದ ಸಮಸ್ಯೆಗೆ ಪರಿಹಾರ ದೊರಕಿರಲಿಲ್ಲ.
   ಇದೀಗ ಅಶೋಕ ಟಾಕೀಸ್ ಹತ್ತಿರ ರೈಲ್ವೆ ಗೇಟ್‌ನಿಂದ 640 ಮೀಟರ್ ದೂರದಲ್ಲಿ ಪದ್ಮಾಂಜಲಿ ಚಿತ್ರಮಂದಿರ ಬಳಿ ಬೃಹತ್ ಗಾತ್ರದ ಎರಡು ವೆಂಟ್‌ಗಳ ಕೆಳ ಸೇತುವೆ ನಿರ್ಮಾಣ ಮಾಡಲು ರೈಲ್ವೆ ಸಚಿವಾಲಯವು ರೂ.49.26 ಕೋಟಿ ಅನುದಾನ ಮಂಜೂರು ಮಾಡಿದೆ ಎಂದಿದ್ದಾರೆ.
   ರೈಲ್ವೆ ಮಾರ್ಗದಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ನಿರ್ಮೂಲನೆ ಮಾಡಿ ಅಲ್ಲಿ ಕೆಳಸೇತುವೆ ಅಥವಾ ಮೇಲು ಸೇತುವೆ ನಿರ್ಮಾಣ ಮಾಡಲು ಶೇ.50ರಷ್ಟು ಅನುದಾನ ನೀಡಲು ಈ ಹಿಂದೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು.
   ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಖುದ್ದು ಭೇಟಿ ಮಾಡಿ ಸಮಸ್ಯೆ ವಿವರಿಸಿ ಸಂಪೂರ್ಣ ಹಣ ಇಲಾಖೆಯಿಂದಲೇ ಭರಿಸುವಂತೆ ಒತ್ತಡ ಹೇರಲಾಗಿತ್ತು.
   ತಮ್ಮ ಒತ್ತಡಕ್ಕೆ ಮಣಿದು ರೈಲ್ವೆ ಕಾಮಗಾರಿಗೆ ಹಿನ್ನಡೆಯಾಗಬಾರದೆಂಬ ಕಾರಣಕ್ಕೆ ಅಶೋಕ ಟಾಕೀಸ್ ಹತ್ತಿರ ಕೆಳಸೇತುವೆ ನಿರ್ಮಾಣಕ್ಕೆ ಭೂ-ಸ್ವಾಧೀನಕ್ಕೆ ಬೇಕಾಗುವ ವೆಚ್ಚವೂ ಸೇರಿ ಒಟ್ಟು 49.26 ಕೋಟಿ ರೂ.ಸಂಪೂರ್ಣ ಹಣ ರೈಲ್ವೆ ಸಚಿವಾಲಯವೇ ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
   ಶಾಂತಿ ಟಾಕೀಸ್ ಕಡೆಯಿಂದ ಬರುವ ವಾಹನಗಳು ರೈಲ್ವೆ ಹಳಿ ಪಕ್ಕದಲ್ಲಿರುವ ಖಾಸಗಿ ಜಮೀನಿನ ಜಾಗದಲ್ಲಿ ನಿರ್ಮಾಣವಾಗುವ 60 ಅಡಿ ಅಗಲದ ಸಮಾನಾಂತರ ರಸ್ತೆಯಲ್ಲಿ ಸಾಗಿ ಪದ್ಮಾಂಜಲಿ ಟಾಕೀಸ್ ಹತ್ತಿರ ನಿರ್ಮಾಣವಾಗಲಿರುವ ಎರಡು ಬೃಹತ್ ಗಾತ್ರದ ವೆಂಟ್‌ಗಳಲ್ಲಿ ಒಂದು ವೆಂಟ್ ಮೂಲಕ ಬಂದು ಈರುಳ್ಳಿ ಮಾರ್ಕೆಟ್ ಕಡೆಗೂ ಹಾಗೂ ಲಿಂಗೇಶ್ವರ ದೇವಸ್ಥಾನದ ಕಡೆಗೂ ಸಂಚರಿಸಬಹುದು.
   ಇನ್ನೊಂದು ವೆಂಟ್‌ನಲ್ಲಿ ಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಶಾಂತಿ ಟಾಕೀಸ್ ರಸ್ತೆ ಕಡೆಗೆ ಹೋಗುವ ವಾಹನಗಳು ಸಂಚರಿಸಬಹುದು. ಒಟ್ಟಾರೆ ರೈಲ್ವೆ ಹಳಿಗೆ ಸಮಾನಾಂತರವಾಗಿ ಸುಮಾರು 700ರಿಂದ 800 ಮೀಟರ್ 60 ಅಡಿ ಅಗಲದ ಸಮಾನಾಂತರ ರಸ್ತೆ ನಿರ್ಮಾಣವಾಗಬೇಕಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಭೂಸ್ವಾಧೀನದ ಹಣವನ್ನೂ ಸಹ ರೈಲ್ವೆ ಇಲಾಖೆಯೇ ಭರಿಸಲಿದೆ.
   ಶೀಘ್ರವೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಾನಾಂತರ ರಸ್ತೆ ನಿರ್ಮಾಣಕ್ಕೆ ಭೂ-ಸ್ವಾಧೀನವಾಗಲಿರುವ ಭೂಮಾಲಿಕರ ಸಭೆಯನ್ನು ಇನ್ನೊಂದು ವಾರದೊಳಗೆ ಕರೆದು ಜಾಗ ನೀಡುವ ಕುರಿತು ಒಪ್ಪಿಗೆ ಪಡೆದು ಭೂಮಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದರೆ ರೈಲ್ವೆ ಇಲಾಖೆ ಕಾಮಗಾರಿಗೆ ಟೆಂಡರ್ ಕರೆಯಲಿದೆ. ಈ ಪ್ರಕ್ರಿಯೆನ್ನು ಶೀಘ್ರವಾಗಿ ಪೂರ್ಣಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts