ಕೇಸರಿ ರಂಗಲ್ಲಿ ಕರಗಿದ ಶೋಭಾಯಾತ್ರೆ

ದಾವಣಗೆರೆ: ರಸ್ತೆಗಳೆಲ್ಲ ಕೇಸರಿ ವರ್ಣಮಯ. ಬೃಹತ್ ಭಗವಾಧ್ವಜಗಳ ಹಾರಾಟ. ಮೇಳೈಸಿದ ಡಿಜೆ ಹಾಡುಗಳ ಸದ್ದು. ಜಾನಪದ ಕಲಾ ತಂಡಗಳ ಮೆರಗು. ಹೆಜ್ಜೆ ಹಾಕಿದ ಯುವಕರ ದಂಡು.

ಸಾರ್ವಜನಿಕ ವಿಜಯದಶಮಿ ಮಹೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಸ್ಮಾರ್ಟ್‌ಸಿಟಿಯಲ್ಲಿ ನಡೆದ ಭವ್ಯ ಶೋಭಾಯಾತ್ರೆಯ ಹೈಲೈಟ್ಸ್ ಇವು. ವಿಶ್ವ ಹಿಂದು ಪರಿಷದ್ ನೇತೃತ್ವದ ಯಾತ್ರೆಯಲ್ಲಿ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಜೈಜೈ ಶ್ರೀ ರಾಮ್ ಘೋಷಣೆ ಮೊಳಗಿದವು.

ಬೇತೂರು ರಸ್ತೆ ವೆಂಕಟೇಶ್ವರ ವೃತ್ತದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಜಡೇಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ. ಕುಮಾರಪಟ್ಟಣಂನ ಪುಣ್ಯಕೋಟಿ ಆಶ್ರಮದ ಶ್ರೀ ಜಗದೀಶ್ವರ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ಕೆಲವು ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದರಿಂದ ಮೆರವಣಿಗೆ ಮಾರ್ಗ ಬದಲಿಯಾಗಿತ್ತು. ಸದಾ ದುರ್ವಾಸನೆ ಬೀರುತ್ತಿದ್ದ ಚಾಮರಾಜಪೇಟೆ (ಮಾರ್ಕೆರ್ಟ್) ರಸ್ತೆ ಮೊದಲ ಬಾರಿಗೆ ಅಂದವಾಗಿತ್ತು!

ಬಂಬೂಬಜಾರ್, ಗಣೇಶ ದೇವಸ್ಥಾನ, ಮಾಜಿ ಪುರಸಭೆ ಕಾಲೇಜು ರಸ್ತೆ, ಚಾಮರಾಜಪೇಟೆ ರಸ್ತೆ, ಬೆಳ್ಳೂಡಿ ಗಲ್ಲಿ ಮೂಲಕ ಕಾಳಿಕಾದೇವಿ ರಸ್ತೆ, ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ವೀರಮದಕರಿನಾಯಕ ವೃತ್ತ, ಬಾರ್‌ಲೈನ್ ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ರೇಣುಕಮಂದಿರದಲ್ಲಿ ಅಂತ್ಯಗೊಂಡಿತು.

ಕೊಲ್ಲಾಪುರದ ಡೋಲ್ ತಾಷಾ ತಂಡದ ಕಲಾವಿದರು ನಾಸಿಕ್ ಡೋಲುಗಳಲ್ಲಿ ಉಣಬಡಿಸಿದ ರುದ್ರತಾಂಡವ ನಿನಾದ ಕಿವಿಗೆ ಇಂಪು ನೀಡಿತು. ಕೀಲುಕುದುರೆ, ನಂದಿಕೋಲು, ಡೊಳ್ಳು ಕುಣಿತ ತಂಡಗಳು ಭಾಗವಹಿಸಿದ್ದವು. ಅಲ್ಲಲ್ಲಿ ಮಜ್ಜಿಗೆ, ನೀರು, ಬಾಳೆಹಣ್ಣು ವಿತರಿಸಲಾಯಿತು.

ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ವಿಪ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಪಂ ಅಧ್ಯಕ್ಷೆ ಜಯಶೀಲಾ, ಮುಖಂಡರಾ ಕೆ.ಬಿ.ಶಂಕರನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಎನ್.ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಜಯಪ್ರಕಾಶ್ ಅಂಬರ್‌ಕರ್, ಎಸ್.ಟಿ.ವೀರೇಶ್, ರವೀಂದ್ರ, ವೈ.ಮಲ್ಲೇಶ್, ದೇವರಮನಿ ಶಿವಕುಮಾರ್ ಮತ್ತಿತರರಿದ್ದರು.

ಬಂಬೂಬಜಾರ್ ರಸ್ತೆಯಲ್ಲಿ ತಂಜಿಮುಲ್ ಮುಸ್ಲಿಮಿನ್ ಸಮಿತಿ ಪರವಾಗಿ ಸಾಧಿಕ್ ಪೈಲ್ವಾನ್, ಹಿಂದು ಮುಖಂಡರಿಗೆ ಶಾಲು ಹೊದಿಸಿ ಗೌರವಿಸಿದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾತ್ರೆಯ ಚಿತ್ರಣ ಡ್ರೋಣ್ ಕ್ಯಾಮೆರಾ ಸೆರೆಹಿಡಿಯುತ್ತಿತ್ತು.

ಅಯೋಧ್ಯೇಲಿ ಮಂದಿರ ನಿರ್ಮಾಣ ಖಚಿತ: ಸರ್ವರಿಗೂ ಒಳಿತನ್ನು ಬಯಸುವುದೇ ವಿಜಯದಶಮಿ ಹಬ್ಬದ ಸಂಕೇತ ಎಂದು ವಿಶ್ವ ಹಿಂದು ಪರಿಷತ್‌ನ ರಾಜ್ಯ ಸಂಘಟನಾ ಸಂಚಾಲಕ ಜಿ.ಬಸವರಾಜ್ ಹೇಳಿದರು.

ರೇಣುಕಮಂದಿರ ಆವರಣದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂಬುಛೇದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯದಶಮಿ, ಅನ್ಯಾಯ ಮಾಡಿದವರಿಗೆ ಒಳ್ಳೆಯ ಫಲವನ್ನು ತರದು. ನ್ಯಾಯಕ್ಕೆ ಮಾತ್ರ ಜಯ ಶಾಶ್ವತವಾಗಿರಲಿದೆ. ದುಷ್ಟತನ ನಾಶಕ್ಕಾಗಿಯೇ ಆಯುಧಗಳಿವೆ. ನಾವು ಬಳಸುವ ಪುಸ್ತಕ, ಲೇಖನಿಗಳು ಆಯುಧವಲ್ಲ. ಶಸ್ತ್ರಗಳಾದ ಖಡ್ಗ, ಬಂದೂಕು ಪುರುಷತ್ವದ ಸಂಕೇತ. ಅವನ್ನು ಪೂಜಿಸಬೇಕು ಎಂದರು.

ಅಯೋಧ್ಯೆ, ಶ್ರೀರಾಮನ ಜನ್ಮಸ್ಥಳವಾಗಿದೆ. ಅಲ್ಲಿ ರಾಮಮಂದಿರ ನಿರ್ಮಿಸುವುದು ಅಚಲವಾಗಿದೆ. ಜಗತ್ತಿನ ಯಾವ ಶಕ್ತಿಯೂ ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ದೇಶದ ಪ್ರತಿಯೊಬ್ಬರೂ ರಾಮಮಂದಿರ ಕಟ್ಟುವ ಸಂಕಲ್ಪ ಹೊಂದಬೇಕು. ಮತ್ತು ಇದು ಸ್ಥಾಪನೆ ಆಗಲೇಬೇಕು. ಈ ವಿಚಾರದಲ್ಲಿ ದೇಶದ ಎಲ್ಲ ಸಂಸದರೂ ಕೂಡ ಸಹಕಾರ ನೀಡಬೇಕೆಂದರು.

ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅಂಬುಛೇದನ ಮಾಡುವ ಮೂಲಕ ಸಾಮೂಹಿಕವಾಗಿ ಬನ್ನಿ ಮುಡಿಯಲು ಚಾಲನೆ ನೀಡಲಾಯಿತು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಎಸ್ಪಿ ಆರ್.ಚೇತನ್, ಬಿಜೆಪಿ ಮುಖಂಡ ಎನ್.ರಾಜಶೇಖರ್, ಬಸವರಾಜ್, ದೇವರಮನಿ ಶಿವಕುಮಾರ್ ಇದ್ದರು.