ದಾವಣಗೆರೆ : ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸಲು ಆಗ್ರಹಿಸಿ ಹಿರಿಯ ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಗುರುವಾರ, ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಧರಣಿ ನಡೆಯಿತು. ಕರ್ನಾಟಕ ಜನಮನ ವೇದಿಕೆ ಹಾಗೂ ನಮ್ಮ ಜೈ ಕರುನಾಡ ವೇದಿಕೆ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಪದೇ ಪದೇ ತಕರಾರು ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದ ಎಲ್ಲ ಗಡಿ ಭಾಗಗಳು (ಕೇರಳ, ಆಂಧ್ರ) ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಪ್ರಗತಿ ಸಾಧಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಗಡಿನಾಡ ಕನ್ನಡಿಗರ ಆತ್ಮಗೌರವ ಹಾಗೂ ಭಾಷಾಭಿಮಾನ ಕಾಪಾಡಲು ಸರ್ಕಾರ ಬದ್ಧವಾಗಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜತಾಂತ್ರಿಕ ಸೌಹಾರ್ದತೆಯನ್ನು ಹಾಗೂ ಜನಜೀವನವನ್ನು ಅಸ್ತವ್ಯಸ್ಥಗೊಳಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕರ್ನಾಟಕದಲ್ಲಿ ರದ್ದುಗೊಳಿಸಬೇಕು ಎಂದರು. ಎಂ.ಇ.ಎಸ್ ರಾಜ್ಯದಲ್ಲಿ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ತೊಡಗದಂತೆ ನಿರ್ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಗಡಿ ಪ್ರದೇಶಗಳ ಅಭಿವೃದ್ಧಿಯ ಅಸಮತೋಲನವನ್ನು ನಿವಾರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು. ಬೆಳಗಾವಿ ಸೇರಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯತ್ತ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಮಹಾದಾಯಿ, ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆಗಳು ಅನುಷ್ಠಾನಗೊಳಿಸಬೇಕು. ಪ್ರವಾಸೋದ್ಯಮ, ಸಾರಿಗೆ, ವಾಣಿಜ್ಯ ವಹಿವಾಟು ಗಡಿ ಭಾಗಗಳಲ್ಲಿ ಸುಗಮವಾಗಿ ನಡೆಯುವಂತಾಗಬೇಕು ಎಂದು ಆಶಿಸಿದರು. ಕನ್ನಡಪರ ಹೋರಾಟಗಾರರಾದ ಟಿ. ಮಂಜುನಾಥ ಗೌಡ, ಕಂಚಿಕೆರೆ ನಾಗರಾಜ್, ಲಿಂಗಪ್ಪ, ರಾಜೇಂದ್ರ ಬಂಗೇರ, ಬಿ.ಎಸ್. ಪ್ರವೀಣ್ ಪಲ್ಲೇದ್, ಸಾಯಿ ಲೋಕೇಶ್ ಇದ್ದರು.

