More

    ತಾಂತ್ರಿಕ ಯೋಜನೆಗಳಲ್ಲಿ ಸಾಮಾಜಿಕ ಕಳಕಳಿ

    ದಾವಣಗೆರೆ : ಅವರೆಲ್ಲ ಭವಿಷ್ಯದ ಇಂಜಿನಿಯರುಗಳು. ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಲಿಕೆಯ ಅನುಭವದಿಂದ ಸಿದ್ಧಪಡಿಸಿದ ಯೋಜನೆಗಳ ಪ್ರದರ್ಶನಕ್ಕೆ ಅಲ್ಲಿ ವೇದಿಕೆ ಒದಗಿಸಲಾಗಿತ್ತು.
     ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ನಿರ್ಮಾಣ 3.0’ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಪ್ರತಿಭೆಗೆ ಕನ್ನಡಿ ಹಿಡಿಯಿತು.
     ರೈತರು ತಮ್ಮ ಬೆಳೆಗಳ ಸ್ಥಿತಿಗತಿ, ಹೊಲದ ತೇವಾಂಶ, ವಾತಾವರಣದ ಉಷ್ಣಾಂಶ, ನೀರಿನ ಅಗತ್ಯ ನಿರ್ವಹಿಸಲು ಲೋರಾ ತಂತ್ರಜ್ಞಾನ ಆಧಾರಿತ ಸಂವಹನವನ್ನು ವಿದ್ಯಾರ್ಥಿಗಳು ತಮ್ಮ ಯೋಜನೆಯಲ್ಲಿ ಬಳಸಿದ್ದಾರೆ. ಅವರಿಗೆ ಅಧ್ಯಾಪಕ ಡಾ.ಕೆ. ಗಣೇಶ್ ಮಾರ್ಗದರ್ಶನ ನೀಡಿದ್ದಾರೆ.
     ಜಲಮೂಲಗಳಲ್ಲಿ ತೇಲುವ ಕಸವನ್ನು ಸಂಗ್ರಹಿಸಲು ಸೌರಶಕ್ತಿ ಚಾಲಿತ ತಂತ್ರಜ್ಞಾನವನ್ನು ವಿದ್ಯಾರ್ಥಿಗಳ ಮತ್ತೊಂದು ತಂಡ ಅಭಿವೃದ್ಧಿಪಡಿಸಿದೆ. ಕೆಲವು ವಿದ್ಯಾರ್ಥಿಗಳು ದಾವಣಗೆರೆ ನಗರದ ವಿವಿಧೆಡೆಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆ ಮಾಡಿದ್ದಾರೆ.
     ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು, ತ್ರಿಬಲ್ ರೈಡಿಂಗ್ ಇನ್ನಿತರ ಉಲ್ಲಂಘನೆ ಮಾಡಿದರೆ ಅದನ್ನು ಪತ್ತೆಹಚ್ಚುವ ತಂತ್ರಜ್ಞಾನ, ಸ್ಮಾರ್ಟ್ ಹೆಲ್ಮೆಟ್ ಹೀಗೆ ಹಲವು ವಿಶೇಷ ಯೋಜನೆಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
     ಪ್ರದರ್ಶನವನ್ನು ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ಶಿವಮೊಗ್ಗದ ಕೈಗಾರಿಕೋದ್ಯಮಿ ಡಿ.ಎಸ್. ಚಂದ್ರಶೇಖರ್ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ್, ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಕಾರ್ಯಾಗಾರದ ಆಯೋಜಕ ಡಾ.ಎ.ಜಿ. ಶಂಕರಮೂರ್ತಿ ಇದ್ದರು.
     …
     * ಅಂಧರು, ಕಿವುಡರಿಗಾಗಿ ಸ್ಮಾರ್ಟ್ ಶೂ
     ಸಾಮಾನ್ಯವಾಗಿ ಅಂಧರು ವಾಕಿಂಗ್ ಸ್ಟಿಕ್ ಹಿಡಿದು ನಡೆದಾಡುವುದನ್ನು ನೋಡಿದ್ದೇವೆ. ಅವರ ಹೆಜ್ಜೆ ಹೆಜ್ಜೆಗೂ ಸೂಚನೆಗಳನ್ನು ನೀಡುವ ಸ್ಮಾರ್ಟ್ ಶೂಗಳನ್ನು ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
     ಅಂಧರು ನಡೆದುಕೊಂಡು ಹೋಗುವ ವೇಳೆ ಎದುರಾಗುವ ಅಡಚಣೆಗಳ ಬಗ್ಗೆ ಶೂಗಳಲ್ಲಿ ಅಳವಡಿಸಿದ ಸೆನ್ಸರ್‌ಗಳು ಸಂದೇಶವನ್ನು ರವಾನಿಸುತ್ತವೆ. ಇಯರ್ ಫೋನ್ ಮೂಲಕ ಅಂಧರು ಅದನ್ನು ಕೇಳಿಸಿಕೊಳ್ಳುತ್ತಾರೆ. ಕಿವುಡರಿಗೆ ವೈಬ್ರೇಟರ್ ನೆರವಿನಿಂದ ಸೂಚನೆಗಳನ್ನು ನೀಡುವ ತಂತ್ರಜ್ಞಾನ ಅದರಲ್ಲಿದೆ.
     …
     * ಎಗ್ ಶೆಲ್‌ಗಳ ಮರುಬಳಕೆ
     ಬಳಸಿ ಬಿಸಾಡುವ ಮೊಟ್ಟೆಯ ಮೇಲ್ಪದರ (ಎಗ್ ಶೆಲ್)ವನ್ನು ಮರು ಬಳಕೆ ಮಾಡಿರುವ ವಿದ್ಯಾರ್ಥಿಗಳು ಅದನ್ನು ಕ್ಯಾಲ್ಷಿಯಂ ಪೋಷಕಾಂಶವಾಗಿ, ಸಸ್ಯಗಳಿಗೆ ರಸಗೊಬ್ಬರವಾಗಿ ಬಳಸಬಹುದು ಎಂಬುದನ್ನು ತಮ್ಮ ಯೋಜನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
     ಮನೆ, ಹೋಟೆಲ್‌ಗಳಿಂದ ಸಂಗ್ರಹಿಸಿ ತಂದ ಎಗ್ ಶೆಲ್‌ಗಳನ್ನು ಪುಡಿ ಮಾಡಿ ಟೊಮ್ಯಾಟೊ ಸಸಿಗೆ ಗೊಬ್ಬರ ರೂಪದಲ್ಲಿ ನೀಡಿ ಅದರಿಂದ ಪ್ರಯೋಜನವಾಗಿದೆ ಎಂದು ನಿರೂಪಿಸಿದ್ದಾರೆ. ಅದೇ ಪುಡಿಯನ್ನು ಕ್ಯಾಲ್ಷಿಯಂ ಪೋಷಕಾಂಶವಾಗಿ ಟ್ಯಾಬ್ಲೆಟ್ ರೂಪ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts