ಮೋದಿ ಗೆಲುವಿಗಾಗಿ ಬೈಕ್ ಏರಿದ ಮಹಿಳೆ

ದಾವಣಗೆರೆ: ಪ್ರಧಾನಿ ಮೋದಿ ಮತ್ತೊಮ್ಮೆ ಭಾರತದ ಆಡಳಿತ ಚುಕ್ಕಾಣಿ ಹಿಡಿಯಬೇಕೆಂಬ ಆಶಯದೊಂದಿಗೆ ಅಭಿಮಾನಿ ಮಹಿಳೆಯೊಬ್ಬರು ದೇಶಾದ್ಯಂತ 15 ಸಾವಿರ ಕಿ.ಮೀ. ದೂರ ಬೈಕ್ ಪ್ರವಾಸ ನಡೆಸುತ್ತಿದ್ದಾರೆ.
ಬೆಂಗಳೂರಿನಿಂದ ದೆಹಲಿಗೆ ಬೈಕ್‌ನಲ್ಲಿ ಪ್ರವಾಸ ಕೈಗೊಂಡಿರುವ ಚೆನ್ನೈನ ರಾಜಲಕ್ಷ್ಮಿ ಮಂದಾ ಶನಿವಾರ ನಗರಕ್ಕೆ ಆಗಮಿಸಿದರು.

ಇಲ್ಲಿನ ಬಂಬೂಬಜಾರ್ ಮುಖ್ಯ ರಸ್ತೆಯ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪದ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಿದರು. 4 ವರ್ಷಗಳಲ್ಲಿ ಮೋದಿ ಅವರು ಮಾಡಿರುವ ಸಾಧನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಬಂಬೂಬಜಾರ್ ಮುಖ್ಯರಸ್ತೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಮೋದಿ ಅವರನ್ನು ಯುಗಪುರುಷ ಎಂದು ಬಣ್ಣಿಸಿದರು. ಮಹಾತ್ಮ ಗಾಂಧೀಜಿ ಮತ್ತು ವಿವೇಕಾನಂದರ ವ್ಯಕ್ತಿತ್ವಕ್ಕೆ ಹೋಲಿಕೆ ಮಾಡಿದರು. ನಾಲ್ಕು ವರ್ಷಗಳಲ್ಲಿ ಈ ದೇಶದಲ್ಲಿ ಬಹಳಷ್ಟು ಸಾಧನೆಗಳಾಗಿವೆ. ಬಡವರ ಬಾಳು ಬೆಳಗಿದೆ. ಅವರು ಇನ್ನೂ 10 ವರ್ಷ ಪ್ರಧಾನಿಯಾಗಿದ್ದರೆ ಭಾರತ ವಿಶ್ವದಲ್ಲೇ ನಂ.1 ಸ್ಥಾನಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.