ಮಹಿಳೆಯರಿಗೆ ಬೇಕು ಸುರಕ್ಷಿತ ವಾತಾವರಣ

ದಾವಣಗೆರೆ : ಮಹಿಳೆಯರಿಗೆ ರಕ್ಷಣೆಯ ಜತೆಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ, ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲದ ಕರಾಟೆ ತರಬೇತಿ ‘ನಾರಿ ಶಕ್ತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಹುಬ್ಬಳ್ಳಿ, ಕೋಲ್ಕತ್ತ ಇನ್ನಿತರ ಕಡೆಗಳಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ಅವಲೋಕಿಸಿದಾಗ ಮಹಿಳೆಯರಿಗೆ ಸುರಕ್ಷತೆ ಕಲ್ಪಿಸುವ ಅವಶ್ಯಕತೆಯಿದೆ. ಹೆಣ್ಣು ಮಕ್ಕಳು ಸ್ವಯಂ ರಕ್ಷಣಾ ಕಲೆಯನ್ನು ರೂಢಿಸಿಕೊಳ್ಳಬೇಕು. ಮಹಿಳಾ ಸುರಕ್ಷತೆಯ ಬಗ್ಗೆ ಇರುವ ಕಾಯ್ದೆಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು. ಯುವಜನರು ಶಿಕ್ಷಣದ ಜತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.  ಜೀವನದಲ್ಲಿ ಮೌಲ್ಯಗಳೆಂಬ ಬೇರುಗಳು ಗಟ್ಟಿಯಾಗಿದ್ದರೆ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಇಂದಿನ ಯುವ ಜನರು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲ ತಾಣಗಳನ್ನು ಉಪಯೋಗಿಸುವಾಗ ಎಚ್ಚರಿಕೆಯಿಂದ ಇರಬೇಕು. ಮೈಮರೆತರೆ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಯುವತಿಯೊಬ್ಬಳ ಉದಾಹರಣೆಯನ್ನು ನೀಡಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ದೈಹಿಕ, ಮಾನಸಿಕವಾಗಿ ಸದೃಢರಾದರೆ ಯಾವುದೇ ಸವಾಲು ಎದುರಿಸಬಹುದು. ಕರಾಟೆಯನ್ನು ಹವ್ಯಾಸವಾಗಿ ರೂಢಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.  ದುರ್ಗಾ ಪಡೆಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಇರುವ ‘ಸುರಕ್ಷಾ ಆ್ಯಪ್’ ನ ಪ್ರಯೋಜನ ಪಡೆದುಕೊಳ್ಳಬೇಕು. ಶಾಲೆ, ಕಾಲೇಜುಗಳಲ್ಲಿ ಯಾರಾದರೂ ದೈಹಿಕ ಅಥವಾ ಮಾನಸಿಕವಾಗಿ ತೊಂದರೆ ಮಾಡಿದರೆ ಶಿಕ್ಷಕರಿಗೆ, ಪಾಲಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.  ಜಿ.ಪಂ. ಸಿಇಒ ಸುರೇಶ ಬಿ. ಇಟ್ನಾಳ್ ಮಾತನಾಡಿ, ಜಿಲ್ಲೆಯ 138 ಶಾಲೆಗಳ 11,229 ಬಾಲಕಿಯರಿಗೆ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸಿಸುವ 3 ಸಾವಿರ ವಿದ್ಯಾರ್ಥಿನಿಯರಿಗೆ ಕರಾಟೆ ಇನ್ನಿತರ ಸ್ವಯಂ ರಕ್ಷಣಾ ಕಲೆಗಳನ್ನು ಕಲಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.  ಶೇ. 49.4 ರಷ್ಟು ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಸಮತೋಲಿತ ಆಹಾರ ನೀಡುವ ಮೂಲಕ ಇದನ್ನು ಸರಿದೂಗಿಸಬೇಕಿದೆ. ಈ ಉದ್ದೇಶಕ್ಕೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನವರು ನೆರವು ನೀಡಲು ಮುಂದೆ ಬಂದಿದ್ದಾರೆ ಎಂದರು.  ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಶೇ. 90 ಕ್ಕಿಂತ ಹೆಚ್ಚು ದೌರ್ಜನ್ಯಗಳು ಪರಿಚಿತರಿಂದಲೇ ಆಗುತ್ತವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸುರಕ್ಷಾ ಆ್ಯಪ್‌ಗೆ ಇದುವರೆಗೆ 150ಕ್ಕೂ ಹೆಚ್ಚು ಕರೆಗಳು ಬಂದಿವೆ. ತುರ್ತು ಸ್ಪಂದನಾ ಪಡೆಯ 16 ವಾಹನಗಳಿವೆ. ಮಕ್ಕಳ ಸಹಾಯವಾಣಿ ಇದೆ. ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.  ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಹೊಂದಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಪೊಲೀಸರೆಂದರೆ ಭಯ ಅಲ್ಲ, ಭರವಸೆ. ಈ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‘ತೆರೆದ ಮನೆ’ ಕಾರ್ಯಕ್ರಮವನ್ನು ಗುರುವಾರದಂದು ಮಾಡಲಾಗುತ್ತಿದೆ ಎಂದು ತಿಳಿಸಿದರು.  ರಕ್ಷಣಾ ಕೌಶಲಗಳ 10 ಜನ ತರಬೇತುದಾರರಿಗೆ, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಿಡಿಪಿಐ ಜಿ. ಕೊಟ್ರೇಶ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ಬಿಸಿಎಂ ಅಧಿಕಾರಿ ಗಾಯತ್ರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ ಇದ್ದರು.

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…