More

  ಆರ್ಥಿಕತೆಯಲ್ಲಿ ಸ್ವಸಹಾಯ ಸಂಘಗಳ ಪಾತ್ರ ಪ್ರಮುಖ

  ದಾವಣಗೆರೆ : ದೇಶದ ಆರ್ಥಿಕತೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
   ಹರಿಹರ ತಾಲೂಕು ಎಳೆಹೊಳೆ ಗ್ರಾಮದಲ್ಲಿ ಶನಿವಾರ, ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
   ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರ ದೇಶದಲ್ಲಿ 1.20 ಕೋಟಿಗೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿವೆ. ಅವುಗಳನ್ನು  ಸಬಲೀಕರಣ ಮಾಡುವುದರೊಂದಿಗೆ ಕೃಷಿ ವಲಯಕ್ಕೂ ತಂತ್ರಜ್ಞಾನ ಪ್ರಯೋಜನ ಒದಗಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದೆ ಎಂದು ತಿಳಿಸಿದರು.
   ಮಹಿಳಾ ಸ್ವಸಹಾಯ ಗುಂಪುಗಳಿಗೆ 1,261 ಕೋಟಿ ರೂ. ವೆಚ್ಚದಲ್ಲಿ ಡ್ರೋನ್‌ಗಳನ್ನು ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನ್ಯಾನೋ ರಸಗೊಬ್ಬರ, ಕೀಟನಾಶಕಗಳ ಸಿಂಪಡಣೆ ಸೇರಿ ಕೃಷಿಯ ವಿವಿಧ ಉದ್ದೇಶಗಳಿಗಾಗಿ ಇದು ಬಳಕೆಯಾಗಲಿದೆ. ಈ ರೀತಿಯಾಗಿ ಮಹಿಳಾ ಸಂಘಗಳ ಸಬಲೀಕರಣ ಹಾಗೂ ಕೃಷಿ ಕ್ಷೇತ್ರದ ಸುಧಾರಣೆಯನ್ನು ಏಕಕಾಲದಲ್ಲಿ ಸುಧಾರಣೆ ಮಾಡುವ ಕೆಲಸಕ್ಕೆ ಸರ್ಕಾರ ಮುನ್ನುಡಿ ಬರೆದಿದೆ ಎಂದರು.
   ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಉಚಿತ ಪಡಿತರ, ಪ್ರಧಾನಮಂತ್ರಿ ಉಜ್ವಲಾ ಯೋಜನೆ, ಜನಧನ್ ಇನ್ನಿತರ ಯೋಜನೆಯಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅವುಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಸಂಕಲ್ಪಯಾತ್ರೆ ನಡೆಯುತ್ತಿದೆ ಎಂದು ಹೇಳಿದರು.
   ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ ಸರ್ಕಾರದ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಇದರಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕು ಎಂದು ತಿಳಿಸಿದರು.
   ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಳೆಸಿರಿಗೆರೆ ಹಾಲೇಶಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ತಾಲೂಕು ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟೆ ಲಿಂಗರಾಜ್, ನಬಾರ್ಡ್ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts