ದಾವಣಗೆರೆ : ಜೂನ್‌ನಿಂದ ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ಕಂದಾಯ ಹಾಗೂ ಸರ್ವೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಹಳೇ ದಾಖಲೆಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಅನವಶ್ಯಕವಾಗಿ ಕಚೇರಿಗೆ ಅಲೆಯುವುದು ತಪ್ಪಲಿದೆ, ಪಾರದರ್ಶಕತೆ ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ಹಳೇ ದಾಖಲೆಗಳು ಅಗತ್ಯವಿರುವ ಬ್ಯಾಂಕ್, ನ್ಯಾಯಾಲಯಗಳಿಗೂ ಆನ್‌ಲೈನ್‌ನಲ್ಲಿಯೇ ಪರಿಶೀಲನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಕಾಗದ ರಹಿತ ಕಚೇರಿ ಮತ್ತು ತ್ವರಿತ ಸ್ಪಂದನೆ ನಿಟ್ಟಿನಲ್ಲಿ ಕಂದಾಯ ಇಲಾಖೆ ಕೆಲಸ ಮಾಡುತ್ತಿದೆ ಎಂದರು.
