More

    ದಾವಣಗೆರೆ ಉತ್ತರ-ದಕ್ಷಿಣದಲ್ಲಿ ಶೇ.85 ಮತದಾನದ ಗುರಿ

    ದಾವಣಗೆರೆ : ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದು ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
     ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
     ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇ 72.96ರಷ್ಟು ಮತದಾನವಾಗಿದೆ. ಆದರೆ, ದಾವಣಗೆರೆ ಉತ್ತರ ಶೇ 65.71 ಹಾಗೂ ದಕ್ಷಿಣ ಶೇ.65.93ರಷ್ಟು ಮತದಾನವಾಗಿದ್ದು, ಇದು ಸರಾಸರಿಗಿಂತ ಕಡಿಮೆ ಎಂದು ಹೇಳಿದರು.
     ದಾವಣಗೆರೆ ಉತ್ತರದಲ್ಲಿ 245 ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 217 ಮತಗಟ್ಟೆಗಳಿವೆ. 2019ರ ಚುನಾವಣೆಯ ಸರಾಸರಿ ಮತದಾನಕ್ಕಿಂತ ಶೇ.20ರಷ್ಟು ಕಡಿಮೆ 9 ಮತಗಟ್ಟೆ, ಶೇ.15ರಷ್ಟು ಕಡಿಮೆ 40 ಮತಗಟ್ಟೆ, ಶೇ.10ರಷ್ಟು ಕಡಿಮೆ 135 ಮತಗಟ್ಟೆಗಳಲ್ಲಿ ಮತದಾನವಾಗಿದೆ ಎಂದರು.
     ಶೇ.10ರಿಂದ 30ರಷ್ಟು ಮತದಾರರ ಸಂಪರ್ಕವಿಲ್ಲ:
     ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನ ಮಾಡಲಾದ 22 ಮತಗಟ್ಟೆಗಳು ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಮತದಾನವಾದ 21 ಮತಗಟ್ಟೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದಾಗ ಶೇ.10ರಿಂದ 30ರಷ್ಟು ಮತದಾರರ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ಅಂಕಿ ಅಂಶದೊಂದಿಗೆ ತಿಳಿಸಿದರು.
     ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರ ವಿವರ ಸಿಕ್ಕಿಲ್ಲ, ಕೆಲವರು ಬಾಡಿಗೆದಾರರಾಗಿದ್ದು ಬೇರೆ ಕಡೆ ವಾಸವಿದ್ದಾರೆ. ಇನ್ನೂ ಕೆಲವೆಡೆ ಒಂದೇ ವಾರ್ಡ್ ವಾಸಿಯಾಗಿದ್ದರೂ ಅಕ್ಕಪಕ್ಕದ ಮತಗಟ್ಟೆಯಲ್ಲಿ ಹಂಚಿಕೆಯಾಗಿದೆ. ಪಿಎನ್‌ಟಿ ಕ್ವಾರ್ಟಸ್, ಕೆಎಸ್‌ಆರ್‌ಟಿಸಿ ವಸತಿಗೃಹ ಸೇರಿ ಅನೇಕ ವಸತಿಗೃಹದಲ್ಲಿ ವಾಸವಿದ್ದವರ ಹೆಸರಿದೆ, ಆದರೆ ಅವರು ಇಲ್ಲಿರುವುದಿಲ್ಲ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ನೀಡಿದರು.
     ಹೋಮ್ ವರ್ಕ್ ಮಾಡಲು ಸೂಚನೆ:
     ಕಡಿಮೆ ಮತದಾನ ಮಾಡಿದ ಮತಗಟ್ಟೆಗಳಲ್ಲಿ ಮತದಾನ ಮಾಡದೇ ಉಳಿಯಲು ಕಾರಣವೇನು. ಅವರನ್ನು ಸಂಪರ್ಕಿಸಲಾದೆಯೇ, ಎಲ್ಲಿ ವಾಸಿಸುವರು, ಎಷ್ಟು ವರ್ಷದಿಂದ ಇಲ್ಲಿ ವಾಸಿಸುತ್ತಿಲ್ಲ ಎಂಬ ಮಾಹಿತಿ ಕೆಲವು ಮತಗಟ್ಟೆ ಅಧಿಕಾರಿಗಳು ಸರಿಯಾಗಿ ನೀಡದಿದ್ದಾಗ ಅಂತಹವರು ಸರಿಯಾಗಿ ಹೋಂ ವರ್ಕ್ ಮಾಡಿಲ್ಲ. ಕರ್ತವ್ಯ ನಿರ್ಲಕ್ಷ್ಯತೆ ತೋರುವ ಬಿಎಲ್‌ಒಗಳ ಮೇಲೆ ಕ್ರಮ ಅನಿವಾರ್ಯ ಎಂದು ಸಿಇಒ ಎಚ್ಚರಿಕೆ ನೀಡಿದರು.  
     ಮತಗಟ್ಟೆ ಅಧಿಕಾರಿಗಳಿಗೆ ನೋಟಿಸ್: ಮತಗಟ್ಟೆ ಅಧಿಕಾರಿಗಳು ಕೆಲವು ಕಡೆ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇನ್ನು ಕೆಲವರು ಕರ್ತವ್ಯ ನಿರ್ಲಕ್ಷ್ಯತೆ ತೋರುತ್ತಿದ್ದಾರೆ. ಸಭೆ ಕರೆದರೂ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಗೈರು ಹಾಜರಾಗಿದ್ದಾರೆ, ಅಂತಹ ಬಿಎಲ್‌ಒಗಳಿಗೆ ನೋಟಿಸ್ ನೀಡಲು ತಿಳಿಸಿದರು.
     ಮತದಾನ ಹೆಚ್ಚಳಕ್ಕೆ ಗುರಿ: ಮತದಾನ ಜಾಗೃತಿ ಕಾರ್ಯಕ್ರಮದ ಜತೆಗೆ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರನ್ನು ಸಂಪರ್ಕಿಸಿ ಶೇ.85ಕ್ಕಿಂತ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳಬೇಕು. ಮತದಾರರ ಚೀಟಿ, ವೋಟರ್‌ಗೈಡ್, ಸಂಕಲ್ಪ ಪತ್ರ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
     ಈ ಬಾರಿಯ ಚುನಾವಣೆಯಲ್ಲಿ ಮೂರು ಮತ್ತು ಅದಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಮತಗಟ್ಟೆ ಇರುವ ಕೇಂದ್ರಗಳಲ್ಲಿ ಮತದಾರರ ಸಹಾಯಮೇಜು ಸ್ಥಾಪಿಸಲಾಗುತ್ತದೆ ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗುತ್ತದೆ. ಮತದಾರರ ಚೀಟಿಯಲ್ಲಿ ಕ್ಯೂಆರ್ ಕೋಡ್ ಸಹ ನೀಡಲಾಗುತ್ತಿದ್ದು ಆನ್ ಮಾಡಿಕೊಂಡಲ್ಲಿ ಮತಗಟ್ಟೆಗೆ ಹೋಗಬಹುದಾಗಿದೆ ಎಂದರು.
     ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಮತದಾರರಿಗೂ ಮತಚೀಟಿ, ಮಾರ್ಗದರ್ಶಿ, ಸಂಕಲ್ಪ ಪತ್ರ ತಲುಪಿಸುವ ಕೆಲಸ ಮಾಡಲಾಗುತ್ತದೆ. ಕೆಲವೆಡೆ ಬಿಎಲ್ಒಗಳು ಸರಿಯಾಗಿ ಕೆಲಸ ಮಾಡದಿರುವುದು ಕಂಡು ಬಂದಿದ್ದು, ಅವರ ಕಾರ್ಯ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
     ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
     —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts