More

    ಡಿಜಿಟಲ್ ಮಾದರಿ ಭೂ ಮಂಜೂರಾತಿಗೆ ಕ್ರಮ

    ದಾವಣಗೆರೆ : ಬಗರ್ ಹುಕುಂ ಜಮೀನು ಮಂಜೂರು ಮಾಡಲು ಮಾಯಕೊಂಡ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಡಿಜಿಟಲ್ ಮಾದರಿಯಲ್ಲಿ ಭೂ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
     ಜಿಲ್ಲಾಡಳಿತ ಭವನದಲ್ಲಿ ಗುರುವಾರ, ಕಂದಾಯ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ಎಲ್ಲ ತಾಲೂಕುಗಳಲ್ಲಿ ಭೂ ಮಂಜೂರಾತಿಗೆ ನಮೂನೆ-57 ರಲ್ಲಿ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಮಾಡಲು ಸಮಿತಿ ಕಾರ್ಯಾರಂಭ ಮಾಡಬೇಕಾಗಿದೆ ಎಂದು ತಿಳಿಸಿದರು.
     ಸಾಗುವಳಿ ಮಾಡಲಾಗುತ್ತಿರುವ ಜಮೀನಿಗೆ ಜಿಯೋಫೆನ್ಸಿಂಗ್, ಎಷ್ಟು ವರ್ಷಗಳಿಂದ ಸಾಗುವಳಿ ಮಾಡಲಾಗುತ್ತಿದೆ ಎಂಬ ಉಪಗ್ರಹ ಛಾಯಾಚಿತ್ರ, ಸರ್ವೇ ಇಲಾಖೆಯಿಂದ ಸಾಗುವಳಿ ಭೂಮಿಗೆ ಸ್ಕೆಚ್ ಪಡೆದು ಸಮಿತಿಯಲ್ಲಿ ಪರಿಶೀಲನೆ ಮಾಡಿದ ನಂತರ ಭೂ ಮಂಜೂರಾತಿ ಮಾಡಲು ನಿಯಮಾವಳಿ ರೂಪಿಸಲಾಗಿದೆ. ಸಮಿತಿ ಸಭೆಯ ನಡಾವಳಿಯನ್ನು ಡಿಜಿಟಲ್ ಮಾದರಿಯಲ್ಲಿ ದಾಖಲಿಸುವ ಮೂಲಕ ಸಭೆಯಲ್ಲಿ ಭಾಗವಹಿಸುವ ಸದಸ್ಯರ ಹಾಜರಾತಿಯನ್ನು ಬಯೋಮೆಟ್ರಿಕ್ ಮೂಲಕ ಪಡೆದುಕೊಳ್ಳಲಾಗುತ್ತದೆ ಎಂದರು.
     ಕೃಷಿಗೆ ಪೂರಕವಾದ ರೂಢಿಗತ, ನಕಾಶೆ ದಾರಿಗಳನ್ನು ಬಿಡಿಸಿಕೊಡುವ ಮೂಲಕ ರೈತರು ವ್ಯವಸಾಯ ಉತ್ಪನ್ನಗಳನ್ನು ಸಾಗಣೆ ಮಾಡಲು ಅನುಕೂಲ ಕಲ್ಪಿಸುವುದು ಎಲ್ಲ ತಹಸೀಲ್ದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
     ರೈತ ಸ್ನೇಹಿಯಾಗಿ ಕೆಲಸ ಮಾಡಲು ಈಗಾಗಲೆ ಸರ್ಕಾರ ಸುತ್ತೋಲೆಯ ಮೂಲಕ ರೂಢಿಗತ, ನಕಾಶೆ ರಸ್ತೆಗಳಿದ್ದಲ್ಲಿ ಅವುಗಳನ್ನು ಯಾರಾದರೂ ಮುಚ್ಚಿದರೆ ಅಂತಹ ದಾರಿಯನ್ನು ಬಿಡಿಸಿಕೊಡುವ ಮೂಲಕ ರೈತರು ತಮ್ಮ ಹೊಲಗಳಿಗೆ ಹೋಗಲು ಅನುಕೂಲ ಕಲ್ಪಿಸಬೇಕು. ರೈತರು ಬೆಳೆದ ಬೆಳೆಗಳನ್ನು ಸಕಾಲದಲ್ಲಿ ಕಟಾವು ಮಾಡಿ ಹೊರ ತರದಿದ್ದಲ್ಲಿ ಹಾಳಾಗುವ ಸಂಭವವಿರುತ್ತದೆ ಎಂದು ತಿಳಿಸಿದರು.
     ನಕಾಶೆಯಲ್ಲಿ ಇಲ್ಲದ ದಾರಿ ರೂಢಿಗತವಾಗಿದ್ದಲ್ಲಿ, ಅದನ್ನು ದಾರಿ ಎಂದು ಪರಿಗಣಿಸಿ ಯಾರಾದರೂ ಇದಕ್ಕೆ ಅಡ್ಡಿಪಡಿಸಿದಲ್ಲಿ ಬಿಡಿಸಿಕೊಡುವ ಜವಾಬ್ದಾರಿ ಕಂದಾಯ ಇಲಾಖೆ ಅಧಿಕಾರಿಗಳದ್ದಾಗಿದೆ ಎಂದರು.
     ರೈತರು ತಮ್ಮ ಜಮೀನುಗಳಿಗೆ ಹೋಗಲು ರೂಢಿಗತ, ನಕಾಶೆ ದಾರಿ ಇಲ್ಲದ ಕಾರಣ ಅನೇಕ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಸುತ್ತೋಲೆಯ ಮೂಲಕ ಪರಿಹರಿಸುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಯಾವುದೇ ದೂರು ರೈತರಿಂದ ಬಂದಲ್ಲಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಸೂಚನೆ ನೀಡಿದರು.
     ರೈತ ಮುಖಂಡರು ಗ್ರಾಮಗಳಲ್ಲಿ ಸ್ಮಶಾನ ಜಾಗದ ಸಮಸ್ಯೆ ಇದೆ ಎಂದಾಗ, ಸ್ಮಶಾನ ಭೂಮಿಯ ಅಭಿವೃದ್ಧಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ಧಿಪಡಿಸಲು ಸಿಇಒ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಹೊನ್ನಾಳಿ ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ, ದಾವಣಗೆರೆ ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್, ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಕೊಳೇನಹಳ್ಳಿ ಸತೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts