ದಾವಣಗೆರೆ : ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಪ್ರಸ್ತುತ ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ‘ಕಳ್ಳ’ ಎಂಬ ಪದ ಬಳಕೆ ಗದ್ದಲಕ್ಕೆ ಕಾರಣವಾಗಿ, ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆವರಗೆರೆ ಗೋಶಾಲೆಯಿಂದ ಚಿಕ್ಕನಹಳ್ಳಿ ವರೆಗಿನ ರಸ್ತೆ ಅಭಿವೃದ್ಧಿಗೆ 39 ಕೋಟಿ ರೂ. ಮೀಸಲಿಟ್ಟಿರುವ ಬಗ್ಗೆ ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್ ಆಕ್ಷೇಪಿಸಿದರು. ಆಗ ಕಾಂಗ್ರೆಸ್ ಸದಸ್ಯ ಎ.ನಾಗರಾಜ್, ‘ಜಿಲ್ಲಾ ಉಸ್ತುವಾರಿ ಸಚಿವರು ದೂರದೃಷ್ಟಿಯಿಂದ ಯೋಜನೆ ರೂಪಿಸಿ ಅನುದಾನ ಕಾಯ್ದಿರಿಸಿದ್ದಾರೆ’ ಎಂದು ಸಮರ್ಥಿಸಿಕೊಂಡರು. ಆಗ ಬಿಜೆಪಿ ಸದಸ್ಯ ಪ್ರಸನ್ನಕುಮಾರ್ ಮಧ್ಯ ಪ್ರವೇಶಿಸಿ, ಚರಂಡಿ ಮೇಲೆ ಹಾಕಿರುವ ಸ್ಲ್ಯಾಬ್ ಕಟ್ ಮಾಡಿ ಹಾಕಿ, ಜರ್ಮನ್ ಮಾದರಿ ವೃತ್ತ ಎನ್ನುತ್ತಿರುವುದು ದೂರದೃಷ್ಟಿಯೆ ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಸದಸ್ಯರಾದ ಎ. ನಾಗರಾಜ ಮತ್ತು ಗಡಿಗುಡಾಳ್ ಮಂಜುನಾಥ್, ‘ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಯುವುದು ಬೇಡ. ಕಾಮಗಾರಿ ಪೂರ್ಣಗೊಂಡ ಬಳಿಕ ಜರ್ಮನ್ ವೃತ್ತದ ಬಗ್ಗೆ ಮಾತನಾಡಿ. ನಿಮ್ಮ ಬಿಜೆಪಿಯಲ್ಲಿದ್ದ ಸಚಿವರು, ಸಂಸದರು ಏನೂ ಮಾಡಲಿಲ್ಲ. ಸೊಳ್ಳಂಬಳ್ಳ ರೈಲ್ವೆ ಸೇತುವೆ ನಿರ್ಮಿಸಿದ್ದೇ ನಿಮ್ಮ ಸಾಧನೆ’ ಎಂದು ಟೀಕಿಸಿದರು. ಇದರಿಂದ ಕೆರಳಿದ ಪ್ರಸನ್ನಕುಮಾರ್, ‘ಕುಂಬಳಕಾಯಿ ಕಳ್ಳ ಅಂದ್ರೆ, ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ’ ಎಂದು ಹೇಳಿದ್ದು ಗದ್ದಲಕ್ಕೆ ಕಾರಣವಾಯಿತು. ಪ್ರಸನ್ನಕುಮಾರ್ ಬಳಸಿದ ಶಬ್ದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗಡಿಗುಡಾಳ್ ಮಂಜುನಾಥ್ ಹಾಗೂ ಎ.ನಾಗರಾಜ್ ‘ಕಳ್ಳ ಎಂದು ಯಾರಿಗೆ ಹೇಳಿದ್ದು? ಆ ಮಾತನ್ನು ವಾಪಸ್ ಪಡೆಯಬೇಕು, ತಕ್ಷಣವೇ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಮೇಯರ್ ಚಮನ್‌ಸಾಬ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಸದಸ್ಯರು ಧ್ವನಿಗೂಡಿಸಿ, ಅಸಾಂವಿಧಾನಿಕ ಪದ ಬಳಸಿದ ಬಿಜೆಪಿಗೆ ಧಿಕ್ಕಾರ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು, ‘ಜನರ ಹಣ ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್‌ಗೆ ಧಿಕ್ಕಾರ’ ಎಂದು ಘೋಷಣೆ ಹಾಕಿದರು. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿ ಕೆಲ ಹೊತ್ತು ಸಭೆ ಮುಂದೂಡಲಾಯಿತು. ಸ್ವಲ್ಪ ಸಮಯದ ಬಳಿಕ ಮತ್ತೆ ಸಭೆ ಮುಂದುವರೆಯಿತು. … (ಬಾಕ್ಸ್) ಕಾರ್ಮಿಕರಿಗೆ ವೇತನ ಪಾವತಿ ಬಾಕಿ ನೇರ ಪಾವತಿ ಕಾರ್ಮಿಕರನ್ನು ದುಡಿಸಿಕೊಂಡರೂ ಅವರಿಗೆ ವೇತನ ಪಾವತಿಸುತ್ತಿಲ್ಲ. ಹಲವರಿಗೆ ಅನ್ಯಾಯವಾಗಿದೆ ಎಂದು ಸದಸ್ಯ ಉದಯ ಕುಮಾರ ಗಮನ ಸೆಳೆದರು. ನಗರದ ಪಾರ್ಕ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 6 ತಿಂಗಳಿಂದ ಸಂಬಳ ಸಿಕ್ಕಿಲ್ಲ ಎಂದು ಎಲ್.ಎಂ.ಎಚ್. ಸಾಗರ್ ಹೇಳಿದರು. ಕೆಲ ಮಹಿಳಾ ಸದಸ್ಯರೂ ಧ್ವನಿಗೂಡಿಸಿದರು. ಸದಸ್ಯೆ ಉಮಾ ಪ್ರಕಾಶ್ ಅವರು, ತಮ್ಮ ವಾರ್ಡ್‌ನಲ್ಲಿರುವ ಸರ್ಕಾರಿ ಸ್ವತ್ತನ್ನು ಖಾಸಗಿ ವ್ಯಕ್ತಿಯೊಬ್ಬರು ತಮ್ಮದೆಂದು ಹೇಳಿಕೊಂಡು ಬಂದಿರುವುದಾಗಿ ತಿಳಿಸಿದರು. ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ಆಯುಕ್ತೆ ರೇಣುಕಾ ಸೂಚನೆ ನೀಡಿದರು. ತಮ್ಮ ವಾರ್ಡ್‌ನ ಪಾರ್ಕ್‌ನಲ್ಲಿ ಕೆಲವರು ಆಶ್ರಮವೊಂದನ್ನು ನಡೆಸುತ್ತಿರುವ ಬಗ್ಗೆ ಬಿಜೆಪಿ ಸದಸ್ಯ ಕೆ.ಎಂ. ವೀರೇಶ್ ಪ್ರಸ್ತಾಪಿಸಿದರು. ಉಪ ಮೇಯರ್ ಸೋಗಿ ಶಾಂತಕುಮಾರ್ ಸಭೆಯಲ್ಲಿದ್ದರು. … (ಬಾಕ್ಸ್) ರಸ್ತೆ ಕಡಿತ ದರ ಪರಿಷ್ಕರಣೆಗೆ ಪ್ರಸ್ತಾವ ನಗರದಲ್ಲಿ ಗ್ಯಾಸ್ ಕಂಪನಿಯ ಪೈಪ್‌ಲೈನ್ ಅಳವಡಿಸುವುದಕ್ಕೆ ರಸ್ತೆ ಕಡಿತ ಮಾಡಲು ಇರುವ ದರವನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ರಸ್ತೆ ಕಡಿತ ಮಾಡಿದರೆ ಸಾರ್ವಜನಿಕರಿಗೆ ಮೀಟರ್‌ಗೆ 1800 ರೂ. ದರ ವಿಧಿಸಲಾಗುತ್ತಿದೆ. ಆದರೆ, ಗ್ಯಾಸ್ ಕಂಪನಿಯ ಪೈಪ್‌ಲೈನ್ ಅಳವಡಿಸಲು ರಸ್ತೆ ಕಡಿತಕ್ಕೆ ಮೀಟರ್‌ಗೆ ಕೇವಲ 1 ರೂ. ನಿಗದಿ ಮಾಡಿರುವುದು ಸರಿಯಲ್ಲ ಎಂದು ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಮಾತನಾಡಿದರು. ರಸ್ತೆಯಲ್ಲಿ ಗುಂಡಿ ತೆಗೆದು ಮತ್ತೆ ಸರಿಪಡಿಸುವುದಿಲ್ಲ. ಪಾಲಿಕೆ ಇಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ. ಆದ್ದರಿಂದ ದರ ಪರಿಷ್ಕರಣೆಯಾಗುವ ವರೆಗೂ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಿಲ್ಲಿಸಬೇಕು. ಹೊಸ ವಾರ್ಡ್‌ಗಳಲ್ಲಿ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಗ್ಯಾಸ್ ಕಂಪನಿಯವರು ಪ್ರತಿ ಮೀಟರ್‌ಗೆ 400 ರೂ. ಠೇವಣಿ ಇಡಬೇಕು. ಕೆಲಸ ಸರಿಯಾಗಿ ಮಾಡದಿದ್ದರೆ ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಚಿತ್ರ: ಡಿವಿಜಿ ಪಾಲಿಕೆ ಸಭೆ 1 ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರಾದ ಪ್ರಸನ್ನಕುಮಾರ್ ಮತ್ತು ಎಸ್.ಟಿ. ವೀರೇಶ್ ತಮ್ಮ ವಿಚಾರ ಮಂಡಿಸಿದರು. ಮೇಯರ್ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಆಯುಕ್ತೆ ರೇಣುಕಾ ಇದ್ದರು.
