ದಾವಣಗೆರೆ ಕಣದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ ಸಂಜೆ ಅಂತ್ಯಗೊಂಡಿತು. ಬಿಸಿಲಿನ ನಡುವೆಯೂ ಕೊನೆ ದಿನ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಯಿತು.

ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪರವಾಗಿ ದಾವಣಗೆರೆ ಉತ್ತರ ಕ್ಷೇತ್ರದ ರೋಡ್ ಶೋ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾಯಿತು. ದಕ್ಷಿಣ ಕ್ಷೇತ್ರದ ರೋಡ್ ಶೋ ಗಾಂಧಿನಗರದಿಂದ ಚಾಲೂ ಆಯಿತು.

ಅಲ್ಲಿಂದ ವಾಹನದಲ್ಲಿ ರೋಡ್ ಶೋ ನಡೆಸಿದ ಶಾಸಕ ಕೆ.ಎಸ್.ಈಶ್ವರಪ್ಪ, ಕಾರ್ಯಕರ್ತರತ್ತ ಕೈ ಬೀಸಿ ವಿಜಯದ ಸಂಕೇತ ಪ್ರದರ್ಶಿಸಿದರು. ರಸ್ತೆಯುದ್ದಕೂ ಬಿಜೆಪಿ ಬಾವುಟ, ಟೋಪಿ, ಕೇಸರಿ ಶಾಲು, ಮೋದಿ ಮುಖವಾಡ, ನಾಸಿಕ್ ಡೊಳ್ಳು ಸದ್ದು ಮಾಡಿದವು.

ಎರಡೂ ರೋಡ್ ಶೋಗಳು, ಅರುಣ ಚಿತ್ರಮಂದಿರದ ಹೊಳೆಹೊನ್ನೂರು ತೋಟದ ಬಳಿ ಸಮಾಗಮಗೊಂಡವು. ನಂತರ ಅಲ್ಲಿ ಬಹಿರಂಗ ಪ್ರಚಾರ ನಡೆಯಿತು. ಶಾಸಕರಾದ ಬಿ.ಎನ್.ಚಂದ್ರಪ್ಪ, ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಡಾ.ಎ,ಎಚ್.ಶಿವಯೋಗಿಸ್ವಾಮಿ, ವೈ.ಎ.ನಾರಾಯಣಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಗಾಯತ್ರಿ ಸಿದ್ದೇಶ್ವರ, ಎಚ್.ಸಿ.ಜಯಮ್ಮ ಪಾಲ್ಗೊಂಡಿದ್ದರು.

ಭದ್ರಾ ವಿಚಾರದಲ್ಲಿ ಬದ್ಧ: ಸಿದ್ದೇಶ್ವರ
ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಬಹಿರಂಗ ಸಭೆಯಲ್ಲಿ ಮಾತನಾಡಿ, ಭದ್ರಾ ನೀರಿನ ವಿಚಾರದಲ್ಲಿ ತಾವು ಬದ್ಧ. ಭದ್ರಾವನ್ನು ಎಂದಿಗೂ ಅಭದ್ರವಾಗಿಸಲು ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಹೊರ ಜಿಲ್ಲೆಯವನು, ಭದ್ರಾ ಮೇಲ್ದಂಡೆ ಯೋಜನೆಗೆ ಒತ್ತು ನೀಡುತ್ತಾರೆ. ಭದ್ರಾ ನಾಲೆಗೆ ಸ್ಪಂದಿಸುವುದಿಲ್ಲ ಎಂಬಿತ್ಯಾದಿ ಅಪಪ್ರಚಾರಗಳನ್ನು ಹಿಂದಿನ ಚುನಾವಣೆಗಳಲ್ಲೂ ಕಾಂಗ್ರೆಸ್‌ನವರು ಹಬ್ಬಿಸಿದ್ದರು. ಆದರೆ, ಜನರು ನನ್ನನ್ನು ಮೂರು ಬಾರಿ ಆಶೀರ್ವದಿಸಿದರು. ಅವರ ಹಸಿಸುಳ್ಳನ್ನು ನಂಬದಿರಿ ಎಂದು ಮನವಿ ಮಾಡಿದರು.

ದೇಶದ ಭದ್ರತೆಗೆ ಚುನಾವಣೆ ನಡೆಯುತ್ತಿದೆ. ಸಮರ್ಥ ನಾಯಕನನ್ನು ಆರಿಸಬೇಕಿದೆ. ಜಿಲ್ಲೆಗೆ ನನ್ನ ಕೊಡುಗೆ ಏನೂ ಇಲ್ಲ ಎಂದು ಹೇಳಿದವರಿಗೆ 9927 ಕೋಟಿ ರೂ.ಗಳಲ್ಲಿ ಮಾಡಿದ ಅಭಿವೃದ್ಧಿ ಕಾಣುತ್ತಿಲ್ಲವೆ ಎಂದು ಪ್ರಶ್ನೀಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ದಾವಣಗೆರೆಯಲ್ಲಿನ ಮೆರವಣಿಗೆ ನೋಡಿ ಕೆಲವರಿಗೆ ಭಯ ಆಗಿದೆ. ಆದರೆ, ಮತಗಟ್ಟೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತ ಕೊಡಿಸಬೇಕು ಎಂದರು.

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಕರೆ ತಂದ ಎಚ್.ವಿಶ್ವನಾಥ್‌ರನ್ನೇ ಆ ಪಕ್ಷದಿಂದ ಹೊರ ದಬ್ಬಲಾಯಿತು. ಹಿಂದುಳಿದವರಿಗೆ ಮೋಸ ಮಾಡುವ ಕಾಂಗ್ರೆಸ್ ಅನ್ನು ನಂಬಬೇಡಿ ಎಂದು ತಿಳಿಸಿದರು.

ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ರೈತರ ಪರವಾಗಿ ನಡೆದುಕೊಳ್ಳಲಿಲ್ಲ. ಕಬ್ಬಿಬ ಬಾಕಿ ಬೆಲೆ ನೀಡಲಿಲ್ಲ. ತೊಗರಿ ಖರೀದಿ ಬೆಲೆ ನೀಡಲಿಲ್ಲ. ರೈತರಿಗೆ ವಂಚಿಸುವ ಮೈತ್ರಿ ಸರ್ಕಾರದಿಂದ ಎಚ್ಚರದಿಂದಿರಬೇಕು ಎಂದರು.

ಸಿದ್ದರಾಮಯ್ಯ ಮಾತಿಗೆ ಬೆಲೆಯಿಲ್ಲ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕುರುಬ ಸಮಾಜ ಬಿಜೆಪಿಗೆ ಮತ ನೀಡಬಾರದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿ ಕಾರಿದರು.‘ಇಂತಹ ಸೊಕ್ಕಿನ ಮಾತಿನಿಂದಾಗಿಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಸಿಎಂ ಸ್ಥಾನದಿಂದ ಕೆಳಗಿಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಇಲ್ಲವಾಯಿತು. ಸಿದ್ದರಾಮಯ್ಯ ಮಾತಿಗೆ ಯಾರೂ ಸೊಪ್ಪು ಹಾಕೋದಿಲ್ಲ’ ಎಂದರು.

ಹಿಂದುಳಿದ ಮಠಗಳಿಗೆ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ನೀಡಿವೆ. ಸಿದ್ದರಾಮಯ್ಯ ಸರ್ಕಾರ ಯಾವ ಕೊಡುಗೆ ನೀಡಿದೆ. ಚುನಾವಣೆ ಬಂದಾಗ ಮಾತ್ರವೇ ಅವರಿಗೆ ಹಿಂದುಳಿದ ವರ್ಗ ನೆನಪಾಗುತ್ತದೆ ಎಂದರು.

Leave a Reply

Your email address will not be published. Required fields are marked *