ಮಧ್ಯ ಕರ್ನಾಟಕದಲ್ಲಿ ಮತದಾನ ಹಬ್ಬಕ್ಕೆ ಕ್ಷಣಗಣನೆ

ಇವಿಎಂ ಸೇರುವ 25 ಅಭ್ಯರ್ಥಿಗಳ ಹಣೆಬರಹ 16.34 ಲಕ್ಷ ಮತದಾರರು 1949 ಮತಗಟ್ಟೆ

ದಾವಣಗೆರೆ: ಸುಡುವ ಬಿರುಬಿಸಿಲಿನ ನಡುವೆಯೇ ಮಧ್ಯ ಕರ್ನಾಟಕ, ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾನ ಹಬ್ಬದ ಕ್ಷಣಗಣನೆಗೆ ಸಜ್ಜಾಗಿದೆ. ಕಣದಲ್ಲಿನ 25 ಅಭ್ಯರ್ಥಿಗಳ ಹಣೆಬರಹವನ್ನು ಜಿಲ್ಲೆಯ ಮತದಾರರು ಇವಿಎಂ ಯಂತ್ರಗಳಲ್ಲಿ ದಾಖಲಿಸಲಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತೆ ಅಖಾಡದಲ್ಲಿದ್ದಾರೆ. ಹಿಂದಿನ 3 ಚುನಾವಣೆಗಳಲ್ಲಿ ಹ್ಯಾಟ್ರಿಕ್ ಜಯಭೇರಿ ಸಾಧಿಸಿದ್ದರು. ಈ ಬಾರಿಯೂ ಗೆದ್ದರೆ, ಕ್ಷೇತ್ರದಲ್ಲಿ ನಾಲ್ಕನೇ ಸಲ ಆಯ್ಕೆಯಾದ ಏಕೈಕ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮತದಾರರು ನೀಡುವ ಮತಾಸ್ತ್ರದ ಮೇಲೆ ಇದು ನಿರ್ಧಾರವಾಗಲಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಧರ್ಮದಡಿ ಬಡ ಅಭ್ಯರ್ಥಿ ಎಂದೇ ಗುರುತಿಸಿಕೊಂಡ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಸತತ ಮೂರು ಬಾರಿ ಪರಾಜಿತರಾಗಿದ್ದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಸೋಲಿನ ಸೇಡನ್ನು ಮಂಜಪ್ಪ ತೀರಿಸಿಕೊಳ್ಳುವರೆ ಎಂಬ ಪ್ರಶ್ನೆಗೂ ಇವಿಎಂ ಯಂತ್ರಗಳು ಉತ್ತರ ಹೇಳಬೇಕಿದೆ.

ಬಹುಜನ ಸಮಾಜ ಪಕ್ಷದ ಬಿ.ಎಚ್.ಸಿದ್ದಪ್ಪ, ಇಂಡಿಯಾ ಪ್ರಜಾ ಬಂಧು ಪಕ್ಷದ ಎಚ್.ಈಶ್ವರಪ್ಪ, ಉತ್ತಮ ಪ್ರಜಾಕೀಯ ಪಕ್ಷದ ಬಿ.ಎ.ಗಣೇಶ, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್‌ನ ಟಿ.ಜಿ.ಮಧು, ಇಂಡಿಯನ್ ಲೇಬರ್ ಪಕ್ಷದ ಎನ್.ರವೀಂದ್ರ ಕೂಡ ಅದೃಷ್ಟ ನೆಚ್ಚಿದ್ದಾರೆ.

ಪಕ್ಷೇತರರಾಗಿ ಕಣದಲ್ಲಿ ಒಟ್ಟು 18 ಹುರಿಯಾಳುಗಳಿದ್ದಾರೆ. ಎಸ್.ಕೆ.ಅಫ್ಜಲ್‌ಖಾನ್, ಅಬ್ದುಲ್ ನಜೀರ್‌ಸಾಬ್, ಅಲೀಮುಲ್ಲಾ, ಆಲೂರು ಎಂ.ಜಿ.ಸ್ವಾಮಿ, ವಿ.ಇಕ್ಬಾಲ್ ಅಹಮ್ಮದ್, ಬಿ.ವಿ.ತಿಪ್ಪೇಸ್ವಾಮಿ, ದಾದಾ ಖಲಂದರ್, ಬರ್ಕತ್ ಅಲಿ, ಮಹಮ್ಮದ್ ಹಯಾತ್, ಎ.ಕೆ.ಮಂಜುನಾಥ, ಸಿ.ಎಂ.ಮಂಜುನಾಥ್, ವಿ.ಮಂಜುನಾಥಾಚಾರ್, ಎಂ.ಬಿ. ವೀರಭದ್ರಪ್ಪ, ಆರ್.ಎನ್.ಶಶಿಕುಮಾರ್, ಡಾ.ಶ್ರೀಧರ ಉಡುಪ, ಸುಭಾನ್‌ಖಾನ್, ಕೆ.ಸೈಯದ್ ಜಬೀವುಲ್ಲಾ, ಎಚ್.ಆರ್.ಹರೀಶ್ ಅವರ ಠೇವಣಿ ಖಾತ್ರಿಯನ್ನು ಜನಮತ ತೀರ್ಮಾನಿಸಲಿದೆ.

16.34 ಲಕ್ಷ ಮತದಾರರು:
ಕ್ಷೇತ್ರದಲ್ಲಿ 16,34,860 ಮತದಾರರಿದ್ದಾರೆ. ಈ ಪೈಕಿ 8,24,331 ಪುರುಷ ಹಾಗೂ 8,10,400 ಮಹಿಳಾ ವೋಟರ್ಸ್‌ ಇದ್ದಾರೆ. 129 ತೃತೀಯ ಲಿಂಗಿಗಳಿದ್ದಾರೆ. 17,577 ಅಂಗವಿಕಲರು, 9,196 ಗರ್ಭಿಣಿ ಮತದಾರರಿದ್ದಾರೆ. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1,89,723, ಹರಪನಹಳ್ಳಿ-2,04,113, ಹರಿಹರ-2,08,211, ದಾವಣಗೆರೆ ಉತ್ತರ-2,43,574, ದಾವಣಗೆರೆ ದಕ್ಷಿಣ-2,08,700, ಮಾಯಕೊಂಡ-1,91,007, ಚನ್ನಗಿರಿ-1,95,827, ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ 1,93,705 ಮತದಾರರಿದ್ದಾರೆ.

1, 949 ಮತಗಟ್ಟೆ:
ಎಂಟು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 1,949 ಮತಗಟ್ಟೆ ತೆರೆಯಲಾಗಿದೆ. 516 ಕ್ರಿಟಿಕಲ್, 80 ವಲ್ನರೆಬಲ್, ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸುವ 16 ಸಖಿ ಮತಗಟ್ಟೆಗಳಿವೆ.
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಅಂಗವಿಕಲ ಸಿಬ್ಬಂದಿಗಳೇ ನಿರ್ವಹಿಸುವ ಪ್ರತ್ಯೇಕ ಮತಗಟ್ಟೆಯೊಂದನ್ನು ಸ್ಥಾಪಿಸಲಾಗಿದೆ. ಒಟ್ಟು 9,519 ಮತದಾನ ಸಿಬ್ಬಂದಿ ಹಾಗೂ 455 ಮಂದಿ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ.
ಅರೆಸೇನಾ ಪಡೆ, ಕೆಎಸ್‌ಆರ್‌ಪಿ ತುಕಡಿ, ಸಿವಿಲ್, ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ ಸೇರಿದಂತೆ 3,500 ಮಂದಿ ಅಧಿಕಾರಿ- ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಚುನಾವಣಾ ಕಾರ್ಯಕ್ಕೆ ಒಟ್ಟು 435 ಒಟ್ಟು ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 332 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.