ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ

ದಾವಣಗೆರೆ: ಏ.23ರಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಪ್ರಜಾತಂತ್ರದ ಹಬ್ಬದಲ್ಲಿ ಕರ್ತವ್ಯ ನಿರ್ವಹಿಸಲು ಚುನಾವಣಾ ಸಿಬ್ಬಂದಿ ತಮಗೆ ನೀಡಲಾದ ಸಾಮಗ್ರಿಗಳೊಂದಿಗೆ ಸೋಮವಾರ ಮತಗಟ್ಟೆಗಳಿಗೆ ತೆರಳಿದರು.

ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಸಿಬ್ಬಂದಿಗೆ ಸಾಮಗ್ರಿಗಳನ್ನು ನೀಡಲಾಯಿತು. ತರಳಬಾಳು ಶಾಲೆಯಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಸಿಬ್ಬಂದಿ ಚುನಾವಣಾ ಸಾಮಗ್ರಿಗಳನ್ನು ಪಡೆದುಕೊಂಡರು.

ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ, ಇಬ್ಬರು ಮತಗಟ್ಟೆ ಅಧಿಕಾರಿಗಳು ಇರುತ್ತಾರೆ. ಈ ಹಿಂದಿನ ಚುನಾವಣೆಗಳಲ್ಲಿ ಸಿಬ್ಬಂದಿಯನ್ನು ಸಾಲಾಗಿ ನಿಲ್ಲಿಸಿ ಸಾಮಗ್ರಿಗಳನ್ನು ನೀಡಲಾಯಿತು. ಈ ಬಾರಿ ಕೊಠಡಿಯೊಳಗೆ ಕೂಡಿಸಿ ಪ್ರತಿ ತಂಡಕ್ಕೆ ವ್ಯವಸ್ಥಿತವಾಗಿ ತಲುಪುವಂತೆ ನೋಡಿಕೊಳ್ಳಲಾಗಿದೆ.

ತಮಗೆ ನೀಡಲಾದ ವಸ್ತುಗಳನ್ನು ಮತಗಟ್ಟೆ ಸಿಬ್ಬಂದಿ ಜೋಡಿಸಿ ಇಟ್ಟುಕೊಂಡರು. ಮತ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿವೆಯೆ ಎಂದು ಪರೀಕ್ಷಿಸಿಕೊಂಡರು. ಕೆಲವರು ಅನುಭವಿ ಸಿಬ್ಬಂದಿ ಇದ್ದರೆ, ಮತ್ತೆ ಕೆಲವರು ಹೊಸಬರೂ ಇದ್ದರು. ಪರಸ್ಪರ ಚರ್ಚಿಸಿದರು. ತಮ್ಮ ಸಂದೇಹಗಳನ್ನು ಸೆಕ್ಟರ್ ಅಧಿಕಾರಿಗಳ ಮುಂದೆ ಹೇಳಿ ಪರಿಹರಿಸಿಕೊಂಡರು. ಯಾವುದೇ ಗೊಂದಲಕ್ಕೆ ಅವಕಾಶ ಇರಲಿಲ್ಲ. ಸಿಬ್ಬಂದಿ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರ, ಅಂಚೆ ಮತಪತ್ರ ಸಹಾಯ ಕೇಂದ್ರ ತೆರೆಯಲಾಗಿತ್ತು.

ಕೆಲ ಸಿಬ್ಬಂದಿ ಆರೋಗ್ಯದ ಕಾರಣಕ್ಕೆ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಒಬ್ಬರು ಅಧಿಕಾರಿಯ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಅವರು ಕೇಳಿಕೊಂಡರು.

ಆವರಣದಲ್ಲಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು, ಶೌಚಗೃಹ ಸೌಲಭ್ಯವೂ ಇತ್ತು. ಊಟಕ್ಕೆ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಜತೆಗೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯೂ ತೆರಳಿದರು. ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಮೋತಿ ವೀರಪ್ಪ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 240 ಮತಗಟ್ಟೆಗಳಿವೆ. 46 ತಂಡಗಳನ್ನು ಮೀಸಲಿಡಲಾಗಿದೆ. ಅಣಜಿ ಮತ್ತು ತ್ಯಾವಣಿಗೆ ಗ್ರಾಮಗಳಲ್ಲಿ ಸಖಿ ಬೂತ್‌ಗಳನ್ನು ತೆರೆಯಲಾಗಿದೆ.
ಬಿ.ಟಿ.ಕುಮಾರಸ್ವಾಮಿ
ಉಪ ವಿಭಾಗಾಧಿಕಾರಿ

ಈ ಚುನಾವಣೆಯಲ್ಲಿ ಸಿಬ್ಬಂದಿಗೆ ಎಲ್ಲ ಅನುಕೂಲಗಳನ್ನೂ ಕಲ್ಪಿಸಲಾಗಿದೆ. ಸಾಮಗ್ರಿಗಳನ್ನು ವ್ಯವಸ್ಥಿತವಾಗಿ ನೀಡಲಾಗುತ್ತಿದೆ. ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳೂ ಇವೆ.
ಅಣ್ಣಪ್ಪ
ಸಹಾಯಕ ಮತಗಟ್ಟೆ ಅಧಿಕಾರಿ

ಸಾಮಗ್ರಿಗಳ ವಿವರ
ಇವಿಎಂ ಕಂಟ್ರೋಲ್ ಯೂನಿಟ್, ಬ್ಯಾಲಟ್ ಯೂನಿಟ್, ವಿ.ವಿ. ಪ್ಯಾಟ್, ಅಳಿಸಲಾಗದ ಶಾಯಿ, ಮೊಹರುಗಳು, ಟ್ಯಾಗ್‌ಗಳು, ವೈದ್ಯಕೀಯ ಕಿಟ್, ಮತದಾರರ ಪಟ್ಟಿಯ ಗುರುತು ನಾಡಿದ ಪ್ರತಿಗಳು, ಮತದಾರರ ಚೀಟಿಗಳು, ಲೇಖನ ಸಾಮಗ್ರಿ, ಕಾರ್ಬನ್ ಪೇಪರ್, ಸೀಸದ ಕಡ್ಡಿಗಳು, ಪೆನ್, ಸೂಜಿ, ದಾರ, ಗಮ್ ಟೇಪ್ ಇತ್ಯಾದಿ.