ಶಿವಮೊಗ್ಗದ ಸ್ಪರ್ಧಿಗಳು ಮೇಲುಗೈ

ದಾವಣಗೆರೆ: ನಗರದ ಗುರುಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯ ಓಪನ್ ವಿಭಾಗದ 7 ಸುತ್ತಿನಲ್ಲಿ 6.5 ಅಂಕಗಳಿಸಿದ ಶಿವಮೊಗ್ಗದ ಎಸ್.ಎಂ. ಅಜಯ್ ಪ್ರಥಮ ಸ್ಥಾನ ಪಡೆದರು.

ಲಿಂ. ಜಯದೇವ ಶ್ರೀಗಳ 62ನೇ ಸ್ಮರಣೋತ್ಸವ ಅಂಗವಾಗಿ ಶಿವಯೋಗಾಶ್ರಮ ಟ್ರಸ್ಟ್, ದಾವಣಗೆರೆ ಚೆಸ್ ಕ್ಲಬ್, ಜೈನ್ ಸೋಷಿಯಲ್ ಗ್ರೂಪ್ ಮತ್ತು ರೋಟರಿ ಕ್ಲಬ್ ಸ್ಪರ್ಧೆ ಆಯೋಜಿಸಿದ್ದವು.

12 ವರ್ಷದೊಳಗಿನ ವಿಭಾಗದಲ್ಲಿ ಶಿವಮೊಗ್ಗದ ಎಚ್.ಎಸ್. ಅಮಿತ್ ಶಾಸ್ತ್ರಿ 7 ಸುತ್ತಿನ ಪಂದ್ಯದಲ್ಲಿ 6.5 ಅಂಕಪಡೆದು ಪ್ರಥಮ ಸ್ಥಾನ ಹಾಗೂ 16 ವರ್ಷದೊಳಗಿನ ವಿಭಾಗದಲ್ಲಿ ಮಂಗಳೂರಿನ ಲಕ್ಷಿತ್ ಬಿ. ಸಾಲಿಯಾನ್ 6.5 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದರು. ವಿಜೇತರಿಗೆ ಜಯದೇವ ಟ್ರೋಫಿ, ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.

ಡಾ. ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಶ್ರೀ ಬಸವಪ್ರಭು ಸ್ವಾಮೀಜಿ, ಚೆಸ್ ಕ್ಲಬ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಬೇತೂರು ಜಗದೀಶ್, ಜೈನ್ ಸೋಷಿಯಲ್ ಗ್ರೂಪ್ ಅಧ್ಯಕ್ಷ ವಿಕಾಸ್ ಸಂಘವಿ, ಚೆಸ್ ಕ್ಲಬ್ ಪದಾಧಿಕಾರಿಗಳಾದ ಯುವರಾಜ್, ಕರಿಬಸಪ್ಪ, ಶಿವಕುಮಾರ್ ಇದ್ದರು.